ಬೆಂಗಳೂರಿಗರೇ ಗಮನಿಸಿ: ಸಿಎಂ ಪದಗ್ರಹಣದ ಹಿನ್ನೆಲೆ ನಾಳೆ ನಗರದ ಈ ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು
ನಾಳೆ (ಜೂನ್ 03) ಲೋಕಭವನದ ಗಾಜಿನ ಮನೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಸುಗಮ ಸಂಚಾರದ ದೃಷ್ಟಿಯಿಂದ ಕೆಲ ರಸ್ತೆಗಳ ಸಂಚಾರವನ್ನು ಬದಲಾವಣೆ ಮಾಡಿ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಆದೇಶ ಹೊರಡಿಸಿದ್ದಾರೆ. ಯಾವೆಲ್ಲ ಮಾರ್ಗಗಗಳಲ್ಲಿ ಸಂಚಾರ ನಿಷೇಧ? ಬದಲಿ ಮಾರ್ಗಗಳು ಯಾವವು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ (DK Shivakumar) ನಾಳೆ (ಜೂನ್ 03) ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶ ಹಾಗೂ ರಾಜ್ಯದ ಅತಿಗಣ್ಯವ್ಯಕ್ತಿಗಳು ಹಾಗೂ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಹಾಗೂ ರೇಸ್‌ಕೋರ್ಸ್ ರಸ್ತೆಯ ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಹೆಚ್ಚಿನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8ರ ವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಬೆಂಗಳೂರಿನ ಚಂಚಾರ ಪೊಲೀಸರು ತಿಳಿಸಿದ್ದಾರೆ.