ಬಂಡಾಯ ತಪ್ಪಿಸಲು ತುರ್ತು ಪರಿಸ್ಥಿತಿ ಸಾಧ್ಯತೆ; ಪಿಎಂ ಆಗಿ ಉಳಿಯಲ್ಲ ಮೋದಿ: ರಾಹುಲ್
ನವದೆಹಲಿ: ವ್ಯವಸ್ಥೆಯ ಮೇಲಿನ ನಿಯಂತ್ರಣ ಕಳೆದುಹೋಗುತ್ತಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ತುರ್ತುಪರಿಸ್ಥಿತಿಯಂತಹ ಸನ್ನಿವೇಶವನ್ನು ಸೃಷ್ಟಿಸಬಹುದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ಹಾಗೆಯೇ, ಮೋದಿ ಅವರು ವರ್ಷದ ಒಳಗೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಪಕ್ಷದ ‘ಆದಿವಾಸಿ ಕಾಂಗ್ರೆಸ್’ ಘಟಕ ಆಯೋಜಿಸಿದ್ದ ಆದಿವಾಸಿ ನಾಯಕರ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್, ‘ಜಾಗತಿಕ ಆರ್ಥಿಕ ಏರಿಳಿತಗಳ ಎದುರು ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದ ಆಘಾತ ನಿಯಂತ್ರಣ ವ್ಯವಸ್ಥೆಯನ್ನೇ ಬಿಜೆಪಿ ಆಡಳಿತ ತೆಗೆದು ಹಾಕಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಭೀಕರ ಆರ್ಥಿಕ ಸಂಕಷ್ಟ ಎದುರಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವ್ಯವಸ್ಥೆಯಲ್ಲಿ ಬಂಡಾಯದ ಬಿಸಿ: ಎದುರಾಗಲಿದೆ ಭಾರಿ ಬಿಕ್ಕಟ್ಟು ‘ದೇಶದ ಸಾಂಸ್ಥಿಕ ವ್ಯವಸ್ಥೆಯಲ್ಲಿ ಬಂಡಾಯದ ಬಿಸಿ ಶುರುವಾಗಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ನಿಮಗೆ ಅನ್ನಿಸುತ್ತಿರಬಹುದು.
ಮುಖ್ಯ ಚುನಾವಣಾ ಆಯುಕ್ತರ ಸಂದೇಶಗಳೇ ನಮಗೆ ಬರುತ್ತಿವೆ. ಗುಪ್ತಚರ, ನ್ಯಾಯಾಂಗ ವ್ಯವಸ್ಥೆಯಲ್ಲಿನ ಅನೇಕ ಹಿರಿಯರು ವ್ಯವಸ್ಥೆಯ ಬಗ್ಗೆ ರೋಸಿ ಹೋಗಿದ್ದಾರೆ. ಹಲವರು ಬಂಡಾಯದ ಮನಸ್ಥಿತಿಯಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ’ ಎಂದು ಹೇಳಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ಜನರಿಗೆ ತಿಳಿದರೆ, ಆರ್ಥಿಕ ಒತ್ತಡ, ಬಡತನ, ಸಂಕಷ್ಟಗಳ ವಿರುದ್ಧ ಜನರ ಆಕ್ರೋಶ ಹೆಚ್ಚಾಗುವ ಬಗ್ಗೆ ಚುನಾವಣಾ ಆಯುಕ್ತರಲ್ಲಿ ಆತಂಕವಿಲ್ಲವೇ ಎಂಬ ಪ್ರಶ್ನೆಗೆ, ‘ಇಡೀ ವ್ಯವಸ್ಥೆಯೇ ಒಳಗಿನಿಂದ ನಡುಗುತ್ತಿದೆ’ ಎಂದಿದ್ದಾರೆ. ಹಾಗೆಯೇ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಅವರ ಮಕ್ಕಳು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕುರಿತ ಮಾಹಿತಿ ತಮಗೆ ಸಿಗುತ್ತಿದೆ ಎಂದೂ ಹೇಳಿಕೊಂಡಿದ್ದಾರೆ.