ಶಾಂತಿ ಒಪ್ಪಂದಕ್ಕೆ ಅಮೆರಿಕದಿಂದ ಒತ್ತಡ ತಂತ್ರ: ಇರಾನ್ ಪರಮೋಚ್ಚ ನಾಯಕ ಮೊಜ್ತಬಾ
ಟೆಹರಾನ್: ಅಮೆರಿಕ ಹಾಗೂ ಇರಾನ್ ಅಧ್ಯಕ್ಷರು ಸಹಿ ಹಾಕಿರುವ ಶಾಂತಿ ಒಪ್ಪಂದಕ್ಕೆ ಭಿನ್ನಾಭಿಪ್ರಾಯಗಳ ನಡುವೆಯೂ ಅನುಮತಿ ನೀಡಿರುವುದಾಗಿ ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಮೊಜ್ತಬಾ ಖಮೇನಿ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಒಪ್ಪಂದವನ್ನು ಮಾಡಿಕೊಳ್ಳಲು ತಮ್ಮೆಲ್ಲಾ ಪ್ರಭಾವ ಮತ್ತು ಒತ್ತಡ ತಂತ್ರಗಳನ್ನು ಬಳಸಿದ್ದರು ಎಂದು ಮೊಜ್ತಬಾ ಖಮೇನಿ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ ಮೊದಲ ಬಾರಿಗೆ ಸರ್ಕಾರಿ ವಾಹಿನಿ ಮೂಲಕ ದೇಶವನ್ನುದ್ದೇಶಿಸಿ ಖಮೇನಿ ಮಾತನಾಡಿದರು. ಅಮೆರಿಕದಿಂದ ಅತಿಯಾದ ಬೇಡಿಕೆಗಳು ಅಥವಾ ಒತ್ತಡಗಳು ಬಂದರೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷರಿಂದ ಭರವಸೆ ಪಡೆದ ಬಳಿಕವೇ ಈ ಒಪ್ಪಂದವನ್ನು ಒಪ್ಪಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ರಾಷ್ಟ್ರದ ಹಕ್ಕುಗಳು ಮತ್ತು ಇಸ್ಲಾಮಿಕ್ ರೆಸಿಸ್ಟೆನ್ಸ್ ಫ್ರಂಟ್ ರಕ್ಷಿಸುವುದಾಗಿ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಸದಸ್ಯರು ಮತ್ತು ಅಧ್ಯಕ್ಷರು ನನಗೆ ದೃಢ ಭರವಸೆ ನೀಡಿದ್ದಾರೆ. ಈ ಬದ್ಧತೆಯನ್ನು ಗೌರವಿಸಿ ನಾನು ಒಪ್ಪಂದಕ್ಕೆ ಅನುಮತಿ ನೀಡಿದ್ದೇನೆ ಎಂದು ಮೊಜ್ತಬಾ ಖಮೇನಿ ಸ್ಪಷ್ಟಪಡಿಸಿದ್ದಾರೆ.