'ಡಿ ಕೆ ಶಿವಕುಮಾರ್ ಬಗ್ಗೆ ಆ ಮಾತನ್ನು ನಾನು ಆಡಿದ್ದಲ್ಲ ದೇವರೇ ನುಡಿಸಿದ್ದು': H D ಕುಮಾರಸ್ವಾಮಿ
ಹಾಸನ: ತಾಯಿ ಚೆನ್ನಮ್ಮ ಅವರ ಅಂತ್ಯ ಸಂಸ್ಕಾರ ವೇಳೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜನಪ್ರತಿನಿಧಿಗಳಿಗೆ ಧನ್ಯವಾದ ಹೇಳುವಾಗ ಯಾವುದೇ ಉದ್ದೇಶ ಇಟ್ಟುಕೊಂಡು ಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೆ ಬಿಡಲಿಲ್ಲ. ಆ ಕ್ಷಣದಲ್ಲಿ ದೇವರು ನನ್ನ ಬಾಯಿಯಿಂದ ಏನು ಹೇಳಿಸಿದರು ಅದನ್ನು ಹೇಳಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಸನದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ತಾಯಿಯ ಅಂತ್ಯಸಂಸ್ಕಾರದ ಸಮಯದಲ್ಲಿ ಮೈಕ್ ಹಿಡಿದು ಮಾತನಾಡಿ ಅಂತ್ಯಸಂಸ್ಕಾರಕ್ಕೆ ಸಹಕಾರ ನೀಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವಾಗ ಮಾನ್ಯ ಮುಖ್ಯಮಂತ್ರಿಗಳು ಎಂದೆ. ನಂತರ ಕೆಲವರು ನಾನು ಮುಖ್ಯಮಂತ್ರಿಗಳ ಹೆಸರು ಹೇಳಬೇಕಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನಾನು ಉದ್ದೇಶಪೂರ್ವಕವಾಗಿ ಅವರ ಹೆಸರು ಹೇಳದ್ದಲ್ಲ, ಅಷ್ಟು ಕೆಳಮಟ್ಟದಲ್ಲಿ ಆಲೋಚನೆ ಮಾಡುವವನು ನಾನಲ್ಲ ಎಂದರು.
ಅಂತ್ಯಸಂಸ್ಕಾರ ವೇಳೆ ಎಲ್ಲರೂ ಶಾಂತ ರೀತಿಯಿಂದ ವರ್ತಿಸಿ, ಗಲಾಟೆ ಮಾಡಬೇಡಿ ಎಂದು ಹೇಳಲು ಮೈಕ್ ಹಿಡಿದುಕೊಂಡೆ. ಅದು ನನ್ನಿಂದ ಬಂದ ಪದಗಳಲ್ಲ, ದೇವರು ಹೊರಡಿಸಿದ ಪದಗಳು ಎಂದರು. ನಿನ್ನೆ ಚೆನ್ನಮ್ಮನವರ ಪುಣ್ಯಭೂಮಿಗೆ ಹೆಚ್ ಡಿ ದೇವೇಗೌಡ ಮತ್ತು ಮಕ್ಕಳು ತೆರಳಿ ಪೂಜೆ ಸಲ್ಲಿಸಿದ್ದು, ಇಂದು ಹಾಲು ತುಪ್ಪ ಕಾರ್ಯ ನೆರವೇರಲಿದೆ.