Select Location
All Locations
State
Region
City / District
145 ವರ್ಷ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಗೆ ನೆರವಾಗ್ತಿದೆ ಶಿಕ್ಷಕರೇ ಅಭಿವೃದ್ಧಿಪಡಿಸಿದ ಎಐ ವೆಬ್​ಸೈಟ್!

145 ವರ್ಷ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಗೆ ನೆರವಾಗ್ತಿದೆ ಶಿಕ್ಷಕರೇ ಅಭಿವೃದ್ಧಿಪಡಿಸಿದ ಎಐ ವೆಬ್​ಸೈಟ್!

ಬೆಂಗಳೂರು, ಜುಲೈ 22: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯದಲ್ಲಿರುವ 145 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಕೇವಲ 30ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಶಿಕ್ಷಕರೇ ಎಐ ಆಧಾರಿತ ಶಿಕ್ಷಣ ವೆಬ್‌ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಈ ರೀತಿಯ ಎಐ ಆಧಾರಿತ ಕಲಿಕಾ ವೇದಿಕೆ ರೂಪುಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

ಶಾಲೆಯ ಶಿಕ್ಷಕರಾದ ಚಂದ್ರಕಾಂತ್ ಗೌಡ ಹಾಗೂ ಜೋಸೆಫಿನ್ ಜಿ. ಲಿಮಾ ಅವರು ಸುಮಾರು ಒಂದೂವರೆ ವರ್ಷದ ಪರಿಶ್ರಮದಿಂದ ಈ ವೆಬ್‌ಸೈಟ್ ರೂಪಿಸಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೂ ಉಪಯುಕ್ತವಾಗುವಂತೆ ಈ ವೇದಿಕೆಯಲ್ಲಿ ಪಠ್ಯಾಧಾರಿತ ವಿಡಿಯೊಗಳು, ಧ್ವನಿ-ದೃಶ್ಯ (ಆಡಿಯೋ-ವಿಜುವಲ್) ವಿಷಯಗಳು ಹಾಗೂ ಸಂವಾದಾತ್ಮಕ ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ

ಪೋಷಕರಿಗೂ ನೆರವಾಗುತ್ತಿದೆ ಎಐ ವೆಬ್​ಸೈಟ್ ಈ ವೆಬ್‌ಸೈಟ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರಿಗೂ ಸಹಾಯಕವಾಗಿದೆ. ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳುವುದರ ಜೊತೆಗೆ ಅವರ ಕಲಿಕೆಯ ಮಟ್ಟವನ್ನು ಪರೀಕ್ಷಿಸುವ ಅವಕಾಶವೂ ಇದರಿಂದ ಸಿಗುತ್ತದೆ ಎಂದು ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಬಿ. ಗುಣಗಿ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಈ ಲಿಂಕ್​​ನಲ್ಲಿ (https://chandugokarna-bit.github.io/gpt-teachers-resources/) ನೀವೂ ವೆಬ್​ಸೈಟ್ ನೋಡಬಹುದು.

120ಕ್ಕೂ ಹೆಚ್ಚು ಶೈಕ್ಷಣಿಕ ವಿಡಿಯೋ ಲಭ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ನಾಯಕ್ ಈ ವೆಬ್‌ಸೈಟ್‌ಗೆ ಚಾಲನೆ ನೀಡಿದ್ದು, ಇದರಲ್ಲಿ 6ರಿಂದ 8ನೇ ತರಗತಿ ಪಠ್ಯಕ್ರಮಕ್ಕೆ ಸಂಬಂಧಿಸಿದ 120ಕ್ಕೂ ಹೆಚ್ಚು ಶೈಕ್ಷಣಿಕ ವಿಡಿಯೊಗಳು ಲಭ್ಯವಿವೆ. ಪುರಾತತ್ವ ತಾಣಗಳ ವರ್ಚುವಲ್ ಪ್ರವಾಸವೂ ಇದೆ! ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET) ವತಿಯಿಂದ ಇ-ಸಂಪನ್ಮೂಲ ತರಬೇತಿ ಪಡೆದಿದ್ದ ಶಿಕ್ಷಕರು, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸಂವಾದಾತ್ಮಕ ಚಟುವಟಿಕೆಗಳು ಹಾಗೂ ವಿಜ್ಞಾನ ವಿಷಯಗಳನ್ನು ಈ ವೆಬ್‌ಸೈಟ್‌ನಲ್ಲಿ ಸೇರಿಸಿದ್ದಾರೆ. ವಿಜಯನಗರ ಹಾಗೂ ಕದಂಬರಂತಹ ಐತಿಹಾಸಿಕ ಸಾಮ್ರಾಜ್ಯಗಳ ಕುರಿತ ವಿವರಣೆಗಳು, ಹಂಪಿ, ಹಳೇಬೀಡು ಸೇರಿದಂತೆ ಪುರಾತತ್ವ ತಾಣಗಳ ವರ್ಚುವಲ್ ಪ್ರವಾಸವೂ ಇದರ ವಿಶೇಷತೆಯಾಗಿದೆ. ಐತಿಹಾಸಿಕ ವ್ಯಕ್ತಿಗಳೇ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುತ್ತಾರೆ! ಎಐ ತಂತ್ರಜ್ಞಾನದ ನೆರವಿನಿಂದ ಐತಿಹಾಸಿಕ ವ್ಯಕ್ತಿಗಳೇ ತಮ್ಮ ಬಗ್ಗೆ ಪರಿಚಯಿಸಿಕೊಳ್ಳುವ ಮಾದರಿಯ ವಿಡಿಯೊಗಳನ್ನು ಸಿದ್ಧಪಡಿಸಲಾಗಿದೆ. ಭಾರತದ ಪ್ರಧಾನಿಗಳ 3D ಮಾಹಿತಿ, ಭಾರತೀಯ ಹಬ್ಬಗಳು, ಗ್ರಾಮೀಣ ಜೀವನ, ‘ಸಂಭ್ರಮ ಶನಿವಾರ’, ‘ನೋ ಬ್ಯಾಗ್ ಡೇ’ ಚಟುವಟಿಕೆಗಳು ಹಾಗೂ ಮಕ್ಕಳಿಗಾಗಿ ‘ಪುಟ್ಟಜ್ಜಿ-ಪುಟ್ಟಜ್ಜಿ ಕಥೆ’ಗಳಂತಹ ವಿಶೇಷ ಅಂಶಗಳನ್ನೂ ವೆಬ್‌ಸೈಟ್ ಒಳಗೊಂಡಿದೆ.


TV9 Kannada 1 hour ago
Home Flash News