Select Location
All Locations
State
Region
City / District
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರ: ರಾಜತಾಂತ್ರಿಕ ಮಾತುಕತೆ ಸ್ಥಗಿತ, ಇರಾನ್ ಅಣುಸ್ಥಾವರದ ಮೇಲೆ ದಾಳಿಯ ಸುಳಿವು ನೀಡಿದ ಟ್ರಂಪ್..!

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರ: ರಾಜತಾಂತ್ರಿಕ ಮಾತುಕತೆ ಸ್ಥಗಿತ, ಇರಾನ್ ಅಣುಸ್ಥಾವರದ ಮೇಲೆ ದಾಳಿಯ ಸುಳಿವು ನೀಡಿದ ಟ್ರಂಪ್..!

ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಯಾವುದೇ ಫಲ ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವೇ ಈಗ ಸಂಘರ್ಷದ ಪ್ರಮುಖ ಕೇಂದ್ರಬಿಂದುವಾಗಿದ್ದು, ಈ ಬೆಳವಣಿಗೆ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲೂ ದೊಡ್ಡ ಪರಿಣಾಮ ಬೀರುತ್ತಿದೆ. ಇತ್ತೀಚಿನ ದಾಳಿಗಳಿಗೂ ಮುನ್ನ ಇರಾನ್‌ನ ಗೃಹ ಸಚಿವ ಎಸ್ಕಂದರ್ ಮೊಮೆನಿ, ಮಧ್ಯಸ್ಥಿಕೆ ವಹಿಸುತ್ತಿರುವ ಪ್ರಮುಖ ದೇಶವಾದ ಪಾಕಿಸ್ತಾನಕ್ಕೆ ಭೇಟಿ ನೀಡಿ, ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಲು ಪ್ರಯತ್ನಿಸಿದ್ದರು. ಆದರೆ, ಯುದ್ಧ ನಿಲ್ಲಿಸಲು ಯಾವುದೇ ಹೊಸ ಒಪ್ಪಂದದ ಸಾಧ್ಯತೆ ಇನ್ನೂ ಸ್ಪಷ್ಟವಾಗಿಲ್ಲ. ಇರಾನ್ ಗೃಹ ಸಚಿವಾಲಯದ ವಕ್ತಾರ ಅಲಿ ಝೈನಿವಾಂದ್ ಅವರು "ರಾಜತಾಂತ್ರಿಕ ಪ್ರಯತ್ನಗಳು ನಿಂತಿಲ್ಲ. ಎರಡೂ ಕಡೆಯ ನಡುವೆ ಸಂದೇಶಗಳ ವಿನಿಮಯ ಇನ್ನೂ ನಡೆಯುತ್ತಿದೆ" ಎಂದು ಹೇಳಿದ್ದರೂ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಈ ನಡುವೆ, ಅರಬ್ ರಾಜತಾಂತ್ರಿಕರೊಬ್ಬರು, ಗಲ್ಫ್ ರಾಷ್ಟ್ರಗಳು ಪರಿಸ್ಥಿತಿ ಶಮನಗೊಳ್ಳುವ ಬಗ್ಗೆ ಆಶಾವಾದ ಕಳೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಟರ್ಕಿಯೊಂದಿಗೆ ಹಲವು ರಾಷ್ಟ್ರಗಳು ಉದ್ವಿಗ್ನತೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಮಹತ್ವದ ಪ್ರಗತಿಯ ಸಾಧ್ಯತೆ ಕ್ಷೀಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಫಿಲಿಪ್ಪೀನ್ಸ್‌ನಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕೈಗೊಳ್ಳುತ್ತಿರುವ ಕ್ರಮಗಳನ್ನು ತೀವ್ರವಾಗಿ ಖಂಡಿಸಿದರು.

ಒಂದು ದೇಶವು ಅಂತರರಾಷ್ಟ್ರೀಯ ಜಲಮಾರ್ಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಸುಂಕ ವಿಧಿಸಿ, ಹಣ ನೀಡದಿದ್ದರೆ ಹಡಗುಗಳ ಮೇಲೆ ದಾಳಿ ನಡೆಸುವ ಪರಿಸ್ಥಿತಿ ನಿರ್ಮಾಣವಾದರೆ ಅದು ಜಗತ್ತಿನಾದ್ಯಂತ ಅಪಾಯಕಾರಿ ಮಾದರಿಯಾಗುತ್ತದೆ ಎಂದು ಎಚ್ಚರಿಸಿದರು. ಇರಾನ್‌ನೊಂದಿಗೆ ಮಾತುಕತೆಗೆ ಅಮೆರಿಕ ಇನ್ನೂ ಸಿದ್ಧವಿದೆ ಎಂದು ರೂಬಿಯೊ ತಿಳಿಸಿದರೂ, "ಸದ್ಯಕ್ಕೆ ಇರಾನ್ ಮಾತುಕತೆಯ ಬಗ್ಗೆ ಗಂಭೀರವಾಗಿರುವಂತೆ ಕಾಣುತ್ತಿಲ್ಲ. ಆದ್ದರಿಂದ ನಮ್ಮ ಗಮನ ಹಡಗುಗಳ ಸುರಕ್ಷತೆಯತ್ತ ಕೇಂದ್ರೀಕೃತವಾಗಿದೆ" ಎಂದರು. ಇರಾನ್ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ಮತ್ತೆ ಇರಾನ್ ಬಂದರುಗಳ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೈಟ್‌ಹೌಸ್‌ನಲ್ಲಿ ಮಾತನಾಡುವ ವೇಳೆ, "ಈಗ ಮಾತುಕತೆ ನಡೆಸುವ ಆಸಕ್ತಿ ನಮಗಿಲ್ಲ" ಎಂದು ಹೇಳುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ. ಇದರ ಜೊತೆಗೆ, ಇರಾನ್‌ನ ನತಾಂಜ್ ಅಣುಶುದ್ಧೀಕರಣ ಕೇಂದ್ರದ ಸಮೀಪ ಬೆಟ್ಟದೊಳಗೆ ನಿರ್ಮಾಣ ಹಂತದಲ್ಲಿರುವ 'ಪಿಕ್‌ಆ್ಯಕ್ಸ್ ಮೌಂಟನ್' (Pickaxe Mountain) ಎಂಬ ಭೂಗತ ಅಣುಸ್ಥಾವರದ ಮೇಲೆ ಅಮೆರಿಕ ಶೀಘ್ರದಲ್ಲೇ ದಾಳಿ ನಡೆಸುವ ಸಾಧ್ಯತೆಯ ಸುಳಿವನ್ನೂ ಅವರು ನೀಡಿದರು. 2025ರಲ್ಲಿ ಇರಾನ್–ಇಸ್ರೇಲ್ ನಡುವಿನ 12 ದಿನಗಳ ಯುದ್ಧದ ವೇಳೆ ನತಾಂಜ್ ಅಣು ಕೇಂದ್ರದ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಆದರೆ, ಅದರ ದಕ್ಷಿಣ ಭಾಗದಲ್ಲಿರುವ ಪಿಕ್‌ಆ್ಯಕ್ಸ್ ಮೌಂಟನ್ ಪ್ರದೇಶಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಇರಾನ್ ಅಲ್ಲಿ ಇನ್ನೂ ನಿರ್ಮಾಣ ಕಾರ್ಯ ಮುಂದುವರಿಸುತ್ತಿದೆ ಎನ್ನಲಾಗಿದೆ. ಇರಾನ್ ತನ್ನ ಅಣು ಕಾರ್ಯಕ್ರಮ ಸಂಪೂರ್ಣ ಶಾಂತಿಯುತ ಉದ್ದೇಶಗಳಿಗಾಗಿಯೇ ಎಂದು ಪುನರುಚ್ಚರಿಸುತ್ತಿದೆ. ಆದರೆ, 2015ರ ಅಣು ಒಪ್ಪಂದದಿಂದ ಅಮೆರಿಕ ಹೊರಬಂದ ಬಳಿಕ, ಶಸ್ತ್ರಾಸ್ತ್ರ ತಯಾರಿಕೆಗೆ ಸಮೀಪದ ಮಟ್ಟದ ಯುರೇನಿಯಂ ಶುದ್ಧೀಕರಣವನ್ನು ಇರಾನ್ ಮತ್ತೆ ಆರಂಭಿಸಿದೆ ಎಂಬ ಆರೋಪಗಳು ಪಶ್ಚಿಮ ರಾಷ್ಟ್ರಗಳಿಂದ ಕೇಳಿಬರುತ್ತಿವೆ. ಇದೇ ವೇಳೆ, ಹಾರ್ಮುಜ್ ಜಲಸಂಧಿ ಮುಚ್ಚಿರುವ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೂ ಭಾರೀ ಹೊಡೆತ ಬಿದ್ದಿದೆ. ಸಾಮಾನ್ಯ ಸಂದರ್ಭಗಳಲ್ಲಿ ವಿಶ್ವದ ಸುಮಾರು ಐದನೇ ಒಂದು ಭಾಗದ ತೈಲ ಮತ್ತು ಅನಿಲ ಇದೇ ಜಲಸಂಧಿಯ ಮೂಲಕ ಸಾಗಾಟವಾಗುತ್ತಿತ್ತು. ಈಗ ತೈಲ ಬೆಲೆಗಳು ಬ್ಯಾರೆಲ್‌ಗೆ 93 ಡಾಲರ್‌ಗಿಂತ ಹೆಚ್ಚಾಗಿದ್ದು, ಪೆಟ್ರೋಲ್ ಬೆಲೆಗಳೂ ಏರಿಕೆಯಾಗುತ್ತಿವೆ. ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸೌದಿ ಅರೇಬಿಯಾ ಹಡಗುಗಳನ್ನು ಗುರಿಯಾಗಿಸುವ ಎಚ್ಚರಿಕೆ ನೀಡಿರುವುದು ಜಾಗತಿಕ ವ್ಯಾಪಾರ ಮಾರ್ಗಗಳ ಭದ್ರತೆ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿದೆ. ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಕೂಡ ಟ್ರಂಪ್ ಬೆದರಿಕೆಗಳಿಗೆ ಪ್ರತಿಕ್ರಿಯಿಸಿ, "ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಯುದ್ಧಕ್ಕೂ ಮುಂಚಿನ ಸ್ಥಿತಿಗೆ ಮರಳುವುದಿಲ್ಲ ಎಂದು ನಾವು ಹಲವು ಬಾರಿ ಹೇಳಿದ್ದೇವೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದು ಹಾರ್ಮುಜ್ ಜಲಸಂಧಿ ಕುರಿತ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಯನ್ನು ಸೂಚಿಸುತ್ತಿದೆ.


Kannadapraba 1 hour ago
Home Flash News