Select Location
All Locations
State
Region
City / District
'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ': ನಮ್ಮತ್ತ ಬೆರಳು ತೋರಿಸುವ ಮೊದಲು ನಿಮ್ಮ ದೇಶ ನೋಡಿಕೊಳ್ಳಿ; ವಿಶ್ವಸಂಸ್ಥೆಯಲ್ಲಿ Pak ವಿರುದ್ಧ ಭಾರತ ಗುಡುಗು..!

'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ': ನಮ್ಮತ್ತ ಬೆರಳು ತೋರಿಸುವ ಮೊದಲು ನಿಮ್ಮ ದೇಶ ನೋಡಿಕೊಳ್ಳಿ; ವಿಶ್ವಸಂಸ್ಥೆಯಲ್ಲಿ Pak ವಿರುದ್ಧ ಭಾರತ ಗುಡುಗು..!

ನ್ಯೂಯಾರ್ಕ್: ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದ್ದು, ಅದನ್ನು ವಿವಾದಿತ ಪ್ರದೇಶವಾಗಿ ಬಿಂಬಿಸುವ ಪಾಕಿಸ್ತಾನದ ಪ್ರಯತ್ನದ ವಿರುದ್ಧ ಭಾರತ ತೀವ್ರವಾಗಿ ಕಿಡಿಕಾರಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ ಭಾರತವು ಪಾಕಿಸ್ತಾನಕ್ಕೆ ತೀವ್ರ ತಿರುಗೇಟು ನೀಡಿದೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದ್ದು, ಗಡಿ ದಾಟಿ ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಬಳಸುತ್ತಿರುವ ಪಾಕಿಸ್ತಾನ, ಭಾರತದ ವಿರುದ್ಧ ಆರೋಪ ಮಾಡುವ ಬದಲು ಮೊದಲು ತನ್ನ ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಖಡಕ್ ಸಂದೇಶ ರವಾನಿಸಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಏಕೈಕ ವಿಷಯವೆಂದರೆ ಪಾಕಿಸ್ತಾನ ಭಾರತದ ಸಾರ್ವಭೌಮ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದಾಗಿದೆ ಎಂದು ಒತ್ತಿ ಹೇಳಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಆಡಳಿತವು ಶಾಂತಿ, ಭದ್ರತೆ ಮತ್ತು ಸಮೃದ್ಧಿಗೆ ಹೇಗೆ ಅಡಿಪಾಯವಾಗುತ್ತದೆ ಎಂಬ ವಿಷಯದ ಕುರಿತು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್ ಅವರು, ಈ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ಪಾಕಿಸ್ತಾನ ತನ್ನ ಸುಳ್ಳು ನಿರೂಪಣೆಯನ್ನು ಮುಂದಿಡಲು ಪ್ರಯತ್ನಿಸಿದೆ ಎಂದು ಆರೋಪಿಸಿದರು. ಈ ವೇದಿಕೆಯಲ್ಲಿ ಬೇರೆ ಯಾವುದೇ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಆದರೆ, ಪಾಕಿಸ್ತಾನ ಇಂದಿನ ಚರ್ಚೆಯನ್ನು ದುರುಪಯೋಗಪಡಿಸಿಕೊಂಡು ತನ್ನ ಸುಳ್ಳು ಪ್ರಚಾರವನ್ನು ಮುಂದಿಟ್ಟಿರುವುದರಿಂದ ನಾವು ಪ್ರತಿಕ್ರಿಯಿಸುವುದು ಅನಿವಾರ್ಯವಾಗಿದೆ" ಎಂದು ಹೇಳಿದರು. ಇದೇ ವೇಳೆ ಜಮ್ಮು-ಕಾಶ್ಮೀರದ ಕುರಿತು ಭಾರತದ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ ಅವರು, "ಜಮ್ಮು-ಕಾಶ್ಮೀರವು ಹಿಂದೆ ಕೂಡ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿತ್ತು, ಈಗಲೂ ಹಾಗೆಯೇ ಇದೆ ಹಾಗೂ ಮುಂದೆಯೂ ಹಾಗೆಯೇ ಇರುತ್ತದೆ. ಇದು ಭಾರತದ ಸಂವಿಧಾನ ಮತ್ತು ಕಾನೂನಿನಿಂದ ನಿರ್ಧಾರಗೊಂಡಿರುವ ಸತ್ಯ. ಆದರೆ, ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಈ ವಾಸ್ತವವನ್ನು ನಿರ್ಲಕ್ಷಿಸುತ್ತಿದೆ" ಎಂದು ಹೇಳಿದರು.

ಬಳಿಕ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಆರೋಪಗಳಿಗೆ ತಿರುಗೇಟು ನೀಡಿದ ಅವರು, "ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಏಕೈಕ ವಿಷಯವೆಂದರೆ ಪಾಕಿಸ್ತಾನ ಭಾರತದ ಸಾರ್ವಭೌಮ ಪ್ರದೇಶದ ಒಂದು ಭಾಗವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದು. ಆ ಪ್ರದೇಶವನ್ನು ಖಾಲಿ ಮಾಡುವುದು ಮತ್ತು ಭಾರತದ ಹಕ್ಕನ್ನು ಗೌರವಿಸುವುದೇ ಪಾಕಿಸ್ತಾನದ ಮುಂದಿರುವ ನಿಜವಾದ ಪ್ರಶ್ನೆಯಾಗಿದೆ" ಎಂದು ಸ್ಪಷ್ಟಪಡಿಸಿದರು. ಸಿಂಧು ಜಲ ಒಪ್ಪಂದ (Indus Water Treaty) ಕುರಿತೂ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಅವರು, "ಸಿಂಧು ಜಲ ಒಪ್ಪಂದದ ಬಗ್ಗೆ ಭಾರತದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ. ಪರಸ್ಪರ ನಂಬಿಕೆ, ವಿಶ್ವಾಸ ಹಾಗೂ ಸದ್ಭಾವನೆ ಇದ್ದಾಗ ಮಾತ್ರ ಯಾವುದೇ ಒಪ್ಪಂದ ಯಶಸ್ವಿಯಾಗಿ ಜಾರಿಯಾಗಲು ಸಾಧ್ಯ. ಆದರೆ, ಪಾಕಿಸ್ತಾನ ಗಡಿ ದಾಟಿ ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿಯ ಸಾಧನವಾಗಿ ಬಳಸುತ್ತಿರುವಾಗ ಅಂತಹ ಸಹಕಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಭಯೋತ್ಪಾದನೆ ಮತ್ತು ದ್ವಿಪಕ್ಷೀಯ ಸಂಬಂಧಗಳು ಒಂದೇ ಸಮಯದಲ್ಲಿ ಸಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಭಾರತ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ದಾಖಲಿಸಿದೆ. ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಎರಡೂ ರಾಷ್ಟ್ರಗಳ ನಡುವಿನ ವಿಶ್ವಾಸಕ್ಕೆ ಧಕ್ಕೆ ತರುತ್ತಿವೆ ಎಂದು ಭಾರತ ಅಭಿಪ್ರಾಯಪಟ್ಟಿದೆ. ಭಾಷಣದ ಕೊನೆಯಲ್ಲಿ ಪಾಕಿಸ್ತಾನಕ್ಕೆ ನೇರ ಸಂದೇಶ ನೀಡಿದ ಪರ್ವತನೇನಿ ಅವರು, "ಭಾರತದ ಕಡೆ ಬೆರಳು ತೋರಿಸುವ ಬದಲು ಪಾಕಿಸ್ತಾನ ತನ್ನ ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕು. ತನ್ನ ಜನರ ಹಿತಾಸಕ್ತಿಗಾಗಿ ತನ್ನ ಮನೆಯನ್ನೇ ಮೊದಲು ಸರಿಪಡಿಸಿಕೊಳ್ಳುವುದು ಪಾಕಿಸ್ತಾನಕ್ಕೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದರು. ಪಾಕಿಸ್ತಾನವು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೆ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಲು ಯತ್ನಿಸಿದ ಸಂದರ್ಭದಲ್ಲಿ ಭಾರತ ಈ ಕಠಿಣ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರದ ಕುರಿತು ತನ್ನ ಸಾಂವಿಧಾನಿಕ ಮತ್ತು ಕಾನೂನುಬದ್ಧ ನಿಲುವನ್ನು ಮತ್ತೊಮ್ಮೆ ವಿಶ್ವ ಸಮುದಾಯದ ಮುಂದೆ ಸ್ಪಷ್ಟಪಡಿಸಿದೆ.


Kannadapraba 1 hour ago
Home Flash News