ಹೊರ್ಮುಜ್ ಜಲಸಂಧಿ ‘ಅಮೆರಿಕದ ಭಾಗ’ ಎಂದು ಟ್ರಂಪ್ ಪುನರುಚ್ಚಾರ: ಇರಾನ್ ಕೆಂಡಾಮಂಡಲ
ವಾಷಿಂಗ್ಟನ್/ಟೆಹರಾನ್: ಹೊರ್ಮುಜ್ ಜಲಸಂಧಿ ಅಮೆರಿಕದ ಭಾಗ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುವ ತಮ್ಮ ಬೆದರಿಕೆಯನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ರೂಥ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಹೊಸ ಅಮೆರಿಕನ್ ಭಾಗ’ ಎಂದು ಗುರುತಿಸಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಇರಾನ್‌ನೊಂದಿಗೆ ಅಣು ಒಪ್ಪಂದದ ಸಾಧ್ಯತೆ ಕುರಿತು ಮಾತನಾಡುತ್ತಾ, ‘ಅದು ಅಮೆರಿಕದ ಭಾಗವಾಗಿದೆ’ ಎಂದಿದ್ದಾರೆ. ಅಮೆರಿಕ ನೌಕಾಪಡೆಯು ಹೊರ್ಮುಜ್ ಜಲಸಂಧಿ ದಾಟಲು ಇದುವರೆಗೆ 1,000ಕ್ಕೂ ಹೆಚ್ಚು ಹಡಗುಗಳಿಗೆ ಭದ್ರತೆ ನೀಡಿದೆ.
ಅಲ್ಲದೆ, ಜಲಸಂಧಿಯ ಮೂಲಕ ಒಂದೇ ದಿನದಲ್ಲಿ ಸುಮಾರು 16 ಮಿಲಿಯನ್ ಬ್ಯಾರಲ್ ತೈಲ ಸಾಗಣೆಯಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ‘ಮೇ ತಿಂಗಳಿನಿಂದ ಇದುವರೆಗೆ 1,300 ವಾಣಿಜ್ಯ ಹಡಗುಗಳಿಗೆ ಅಮೆರಿಕ ಪಡೆಗಳು ಭದ್ರತೆ ಒದಗಿವೆ’ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ. ಆದರೆ, ಇರಾನ್ ಈ ಪ್ರತಿಪಾದನೆಯನ್ನು ತಳ್ಳಿಹಾಕಿದ್ದು, ಜಲಸಂಧಿಯನ್ನು ಯಾವುದೇ ಕಾರಣಕ್ಕೂ ಮತ್ತೆ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.