Select Location
All Locations
State
Region
City / District
AUSvsBAN: ಬಾಂಗ್ಲಾ ಬೆನ್ನುಹುರಿ ಮುರಿದ ಮಿಚ್‌ ಸ್ಟಾರ್ಕ್:‌ ಎರಡೇ ದಿನಕ್ಕೆ ಟೆಸ್ಟ್‌ ಮುಕ್ತಾಯ

AUSvsBAN: ಬಾಂಗ್ಲಾ ಬೆನ್ನುಹುರಿ ಮುರಿದ ಮಿಚ್‌ ಸ್ಟಾರ್ಕ್:‌ ಎರಡೇ ದಿನಕ್ಕೆ ಟೆಸ್ಟ್‌ ಮುಕ್ತಾಯ

ಮೆಕಾಯ್:‌ ಸರಣಿಯ ಮೊದಲ ಪಂದ್ಯದಲ್ಲಿ ಸೋತು ಅವಮಾನ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡ ಎರಡನೇ ಪಂದ್ಯದಲ್ಲಿ ತಿರುಗಿ ಬಿದ್ದಿದೆ. ಮೆಕಾಯ್‌ ಟೆಸ್ಟ್‌ ಪಂದ್ಯವನ್ನು ಆಸೀಸ್‌ ತಂಡವು ಇನ್ನಿಂಗ್ಸ್‌ ಮತ್ತು 51 ರನ್‌ ಅಂತರದಿಂದ ಗೆದ್ದು ಬೀಗಿದೆ. ಮೊದಲ ಇನ್ನಿಂಗ್ಸ್‌ ನಲ್ಲಿ 64 ರನ್‌ ಗೆ ಆಲೌಟಾಗಿದ್ದ ಬಾಂಗ್ಲಾದೇಶ ತಂಡವು ಎರಡನೇ ಇನ್ನಿಂಗ್ಸ್‌ ನಲ್ಲೂ ನೂರು ರನ್‌ ಮಾಡಲು ಅಶಕ್ತವಾಗಿದೆ. ಕೇವಲ 95 ರನ್‌ ಗೆ ಆಲೌಟಾಗಿದೆ. ಈ ಮೂಲಕ ಟೆಸ್ಟ್‌ ಪಂದ್ಯವು ಎರಡೇ ದಿನದಲ್ಲಿ ಅಂತ್ಯವಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 165 ರನ್‌ ಗಳಿಸಿದ್ದ ಆಸೀಸ್‌ ಎರಡನೇ ದಿನದ ಆರಂಭದಲ್ಲಿ 210 ರನ್‌ ಗೆ ಆಲೌಟಾಗಿದೆ. ಕ್ಯಾಮರೂನ್‌ ಗ್ರೀನ್‌ 67 ರನ್‌ ಮಾಡಿದರೆ, ನಾಥನ್‌ ಲಿಯಾನ್‌ 32 ರನ್‌ ಮಾಡಿ ಆಸೀಸ್‌ ಲೀಡ್‌ ಹೆಚ್ಚಿಸಿದರು. ಬಾಂಗ್ಲಾ ವೇಗಿ ಶೊರಿಫುಲ್‌ ಇಸ್ಲಾಂ ಏಳು ವಿಕೆಟ್‌ ಪಡೆದು ಮಿಂಚಿದರು.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾ ಮತ್ತೆ ಬ್ಯಾಟಿಂಗ್‌ ಗೆ ಪರದಾಟಿತು. ನಾಯಕ ನಜ್ಮುಲ್‌ ಶಾಂಟೋ 31 ರನ್‌ ಮಾಡಿದರೆ, ಅನುಭವಿ ಮುಶ್ಫಿಕರ್‌ ರಹೀಂ ಅಜೇಯ 29 ರನ್‌ ಮಾಡಿದರು. ಉಳಿದ ಯಾವ ಬ್ಯಾಟರ್‌ ಗಳೂ ಎರಡಂಕಿ ಮೊತ್ತ ದಾಟಲಿಲ್ಲ. ಮೊದಲ ಇನ್ನಿಂಗ್ಸ್‌ ನಲ್ಲಿ ಆರು ವಿಕೆಟ್‌ ಪಡೆದು ಮಿಂಚಿದ್ದ ಮಿಚ್‌ ಸ್ಟಾರ್ಕ್‌ ಮತ್ತೆ ನಾಲ್ಕು ವಿಕೆಟ್‌ ಪಡೆದರು. ಉಳಿದಂತೆ ಪ್ಯಾಟ್‌ ಕಮಿನ್ಸ್‌ ಮತ್ತು ಲಿಯಾನ್‌ ತಲಾ ಮೂರು ವಿಕೆಟ್‌ ಪಡೆದರು. ಮಿಚೆಲ್‌ ಸ್ಟಾರ್ಕ್‌ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.


Udayavani 2 hours ago
Home Flash News