LPG Refill Booking: ಗ್ರಾಮೀಣ ಭಾಗದ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಸಿಹಿ ಸುದ್ದಿ!
ನವದೆಹಲಿ: ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್‌ಪಿಜಿ (LPG) ಗೃಹಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಗ್ಯಾಸ್ ಸಿಲಿಂಡರ್ ರಿಫಿಲ್ ಬುಕಿಂಗ್ ಮಾಡುವ ಸಮಯದ ಅಂತರ ಒಂದೇ ರೀತಿ ಇರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ, ಗ್ರಾಮೀಣ ಭಾಗದ ಗ್ರಾಹಕರಿಗೆ ಇದ್ದ 45 ದಿನಗಳ ಸುದೀರ್ಘ ಕಾಯುವಿಕೆಯ ಅವಧಿಯನ್ನು ಕಡಿತಗೊಳಿಸಲಾಗಿದ್ದು, ಇನ್ಮುಂದೆ 25 ದಿನಗಳಿಗೊಮ್ಮೆ ಹೊಸ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತು ಪೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ಸಚಿವ ಸುರೇಶ್ ಗೋಪಿ ಅವರು, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದ ಕಾರಣ ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಕಾಯುವಿಕೆಯ ಅವಧಿಯನ್ನು ವಿಧಿಸಲಾಗಿತ್ತು.
ಆದರೆ, ಪ್ರಸ್ತುತ ಎಲ್‌ಪಿಜಿ ಪೂರೈಕೆ ಪರಿಸ್ಥಿತಿಯಲ್ಲಿ ಗಣನೀಯ ಚೇತರಿಕೆಯಾಗಿದ್ದು, ಸಿಲಿಂಡರ್ ಬಾಕಿ ಉಳಿಕೆ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿಯಮವನ್ನು ಸಡಿಲಗೊಳಿಸಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರ ಎಲ್ಲಾ ಗೃಹ ಬಳಕೆದಾರರು ಇನ್ಮುಂದೆ ಪ್ರತಿ 25 ದಿನಗಳ ಅಂತರದಲ್ಲಿ ಸಿಲಿಂಡರ್ ರಿಫಿಲ್ ಬುಕ್ಕಿಂಗ್ ಮಾಡಬಹುದಾಗಿದೆ. ತೈಲ ಕಂಪನಿಗಳಿಗೆ ಈ ಆದೇಶವನ್ನು ತಕ್ಷಣವೇ ಜಾರಿಗೆ ತರುವಂತೆ ಪೆಟ್ರೋಲಿಯಂ ಸಚಿವಾಲಯವು ಸೂಚನೆ ನೀಡಿದೆ.