ICC Rankings: ಎರಡು ಸ್ಥಾನ ಏರಿಕೆ ಕಂಡ ದೀಪ್ತಿ; ಅಗ್ರ ಶ್ರೇಯಾಂಕದಲ್ಲಿ ಮುಂದುವರಿದ ಚರಣಿ
ದುಬೈ: 2026 ರ ಮಹಿಳಾ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ (Deepti Sharma) ಇತ್ತೀಚಿನ ಟಿ20ಐ ಬೌಲಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನ ಏರಿಕೆಯಾಗಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ತಂಡದ ಸಹ ಆಟಗಾರ್ತಿ ಶ್ರೀ ಚರಣಿ (Shree Charani) ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ದೀಪ್ತಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತ ತಂಡವನ್ನು ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಮುನ್ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅದ್ಭುತ ಪ್ರದರ್ಶನವು ಟಿ20ಐ ಬೌಲಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನಗಳನ್ನು ಏರಿ ಆರನೇ ಸ್ಥಾನಕ್ಕೆ ತಲುಪಲು ಸಹಾಯ ಮಾಡಿದೆ. ಶ್ರೀ ಚರಣಿ ನಂಬರ್ 1 ಶ್ರೇಯಾಂಕದ ಬೌಲರ್ ಆಗಿ ಮುಂದುವರೆದಿದ್ದಾರೆ.
ದೀಪ್ತಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಅಗ್ರ ಶ್ರೇಯಾಂಕ ತಲುಪಿದ್ದರು. ಈಗ ಚರಣಿಗಿಂತ 60 ರೇಟಿಂಗ್ ಪಾಯಿಂಟ್‌ಗಳ ಹಿಂದಿದ್ದಾರೆ. ಇಬ್ಬರು ಭಾರತೀಯ ತಾರೆಯರ ನಡುವಿನ ಬೌಲರ್‌ಗಳು ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ನಾನ್‌ಕುಲುಲೆಕೊ ಮಲಾಬಾ ಮತ್ತು ಲಾರೆನ್ ಬೆಲ್ ಇದ್ದಾರೆ. ದೀಪ್ತಿ ಅಲ್ಲದೆ ಇತರ ಆಟಗಾರರು ಕೂಡಾ ಉತ್ತಮ ಪ್ರಗತಿ ಹೊಂದಿದ್ದಾರೆ. ಬಾಂಗ್ಲಾದೇಶದ ವೇಗಿ ಮರುಫಾ ಅಕ್ತರ್ ಗಮನಾರ್ಹ ಜಿಗಿತವನ್ನು ಸಾಧಿಸಿ, 19 ಸ್ಥಾನಗಳನ್ನು ಭಡ್ತಿ ಪಡೆದು 18 ನೇ ಸ್ಥಾನ ತಲುಪಿದ್ದಾರೆ. ಲಂಕಾ ನಾಯಕಿ ಚಮರಿ ಅಥಪತ್ತು ಐದು ಸ್ಥಾನಗಳ ಏರಿಕೆ ಕಂಡು 28 ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶದ ಸುಲ್ತಾನಾ ಖತುನ್ ಒಂಬತ್ತು ಸ್ಥಾನಗಳ ಏರಿಕೆ ಕಂಡು 37 ನೇ ಸ್ಥಾನಕ್ಕೇರಿದ್ದಾರೆ. ಬ್ಯಾಟಿಂಗ್ ರಾಂಕಿಂಗ್ ನಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ಸ್ಮೃತಿ ಮಂಧನಾ ಐದನೇ ಸ್ಥಾನ, ಶಫಾಲಿ ವರ್ಮಾ ಏಳನೇ ಸ್ಥಾನ ಮತ್ತು ಹರ್ಮನ್ ಪ್ರೀತ್ ಕೌರ್ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.