ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ: ಯಾವ ವಲಯಗಳಿಗೆ ಲಾಭ?
ನವದೆಹಲಿ: ಜವಳಿ, ಚರ್ಮ ಉದ್ಯಮ ಸೇರಿದಂತೆ ಕಾರ್ಮಿಕ ವಲಯದ ಹಲವು ಭಾರತೀಯ ಉತ್ಪನ್ನಗಳಿಗೆ ಸುಂಕರಹಿತ ಮಾರುಕಟ್ಟೆ ಒದಗಿಸುವ ಮಹತ್ವದ ‘ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ಟಿಎ) ಮಂಗಳವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
ಕಳೆದ ಏಪ್ರಿಲ್ 27ರಂದು ಉಭಯ ದೇಶಗಳು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದವು. ವಿಶೇಷವೆಂದರೆ, ಕಳೆದ ಐದು ವರ್ಷಗಳಲ್ಲಿ ಜಾರಿಗೆ ಬಂದ ಏಳನೇ ವ್ಯಾಪಾರ ಒಪ್ಪಂದ ಇದಾಗಿದೆ.
ಇದಕ್ಕೂ ಮುನ್ನ ಯುಎಇ, ಮಾರಿಷಸ್, ಐರೋಪ್ಯ ಮುಕ್ತ ವ್ಯಾಪಾರ ಸಂಘಟನೆ (ಇಎಫ್‌ಟಿಎ), ಬ್ರಿಟನ್, ಒಮಾನ್ ಹಾಗೂ ಆಸ್ಟ್ರೇಲಿಯಾ ದೇಶಗಳೊಂದಿಗೆ ಭಾರತ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿತ್ತು.
2010ರಲ್ಲಿ ಆರಂಭವಾಗಿದ್ದ ಈ ಒಪ್ಪಂದದ ಮಾತುಕತೆಗಳು 2015ರಲ್ಲಿ ಸ್ಥಗಿತಗೊಂಡಿದ್ದವು. ಬಳಿಕ 2025ರ ಮಾರ್ಚ್‌ನಲ್ಲಿ ಮಾತುಕತೆಗೆ ಮರುಜೀವ ತುಂಬಲಾಗಿತ್ತು. ಇದೀಗ ಜಾರಿಗೆ ಬಂದಿರುವ ಈ ಒಪ್ಪಂದವು ಭಾರತದ ಕಾರ್ಯಾಚರಣೆಯಲ್ಲಿರುವ 17ನೇ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.