ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವರ್ಷಕ್ಕೂ ಹೆಚ್ಚು ಕಾಲ ನಡೆದ ಸುದೀರ್ಘ ಮಾತುಕತೆಯ ನಂತರ ಈ ಪ್ರಗತಿ ಕಂಡುಬಂದಿದ್ದು, ಈ ಒಪ್ಪಂದವು ಈ ಹಿಂದೆ ಅಮೆರಿಕ ಮಾಡಿಕೊಂಡ ಇತರ ಒಪ್ಪಂದಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ತೀರಾ ಹತ್ತಿರದಲ್ಲಿದ್ದೇವೆ. ಎರಡು ದೇಶಗಳು ಒಪ್ಪಂದಕ್ಕೆ ಉತ್ಸುಕವಾಗಿವೆ. ಆದರೆ ಇದು ಈವರೆಗೆ ನಾವು ಮಾಡಿಕೊಂಡಿರುವ ಒಪ್ಪಂದಗಳಿಗಿಂತ ಭಿನ್ನವಾದ ಸ್ವರೂಪದಲ್ಲಿರಲಿದೆ" ಎಂದು ತಿಳಿಸಿದ್ದಾರೆ. ಆದರೆ ಒಪ್ಪಂದದ ನಿಖರ ಸ್ವರೂಪ ಮತ್ತು ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಅಮೆರಿಕದ ಸುಂಕ ನೀತಿಯಲ್ಲಿ ಆಗಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಮಾತುಕತೆ ಮುಂದುವರಿದಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ವ್ಯಾಪಾರ, ಇಂಧನ, ತಂತ್ರಜ್ಞಾನ, ರಕ್ಷಣೆ ಮತ್ತು ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಉನ್ನತ ಮಟ್ಟದ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರೊಂದಿಗೆ ಮಿಲ್ವಾಕಿ ಮತ್ತು ವಾಷಿಂಗ್ಟನ್‌ನಲ್ಲಿ ಸಭೆ ನಡೆಸಿ ಒಪ್ಪಂದದ ಪ್ರಮುಖ ಅಂಶಗಳ ಕುರಿತು ಚರ್ಚಿಸಿದ್ದರು. ಫೆಬ್ರವರಿಯಲ್ಲಿ ಉಭಯ ದೇಶಗಳು ಪ್ರಥಮ ಹಂತದ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಸಿದ್ಧಪಡಿಸಿದ್ದರೂ, ಸುಂಕ ನಿಯಮಗಳಲ್ಲಿನ ಬದಲಾವಣೆಗಳಿಂದಾಗಿ ಪುನಃ ಮಾತುಕತೆಗಳು ಚುರುಕುಗೊಂಡಿವೆ.