ರಾಹುಲ್ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್’ ದೂರು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಪಟ್ಟ ಸ್ಟಿಂಗ್ ವಿವಾದ ಈಗ ಹೈಕಮಾಂಡ್ ಅಂಗಳದತ್ತ ಸಾಗಿದ್ದು, ಪ್ರಕರಣದ ಬಗ್ಗೆ ಸಾದ್ಯಂತ ವಿವರಣೆ ನೀಡುವುದಕ್ಕಾಗಿ ಸಿದ್ದರಾಮಯ್ಯ ಅವರು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಮಯಾವಕಾಶವನ್ನು ಕೋರಿದ್ದಾರೆ.
ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿಯಿಂದ ಆಯೋಜಿಸಿರುವ ‘ಮತ ಉಳಿಸಿ-ದೇಶ ಉಳಿಸಿ’ ಆಂದೋಲನದಲ್ಲಿ ಭಾಗವಹಿಸುವುದಕ್ಕಾಗಿ ಸಿದ್ದರಾಮಯ್ಯ ಶನಿವಾರ ಸಂಜೆಯೇ ದೆಹಲಿಗೆ ತೆರಳಿದ್ದಾರೆ. ಅವರೊಂದಿಗೆ ಕೆಲ ಆಪ್ತ ನಾಯಕರು ಜತೆಯಾಗಿದ್ದಾರೆ. ನ.2ರಂದು ರಾಹುಲ್ ಗಾಂಧಿ ಭೇಟಿಗೆ ಅವರಿಗೆ ಸಮಯಾವಕಾಶ ದೊರೆತಿದ್ದು, ಪ್ರಕರಣದ ಬಗ್ಗೆ ವಿವರಣೆ ನೀಡಲಿದ್ದಾರೆ.
ಸಿಟ್ಟಾಗಿರುವ ಸಿದ್ದು:
ತಾವು ನೀಡಿದ ದೂರಿನ ಆಧಾರದ ಮೇಲೆ ತನಿಖೆಯನ್ನು ಅಪೂರ್ಣವಾಗಿ ಮುಕ್ತಾಯಗೊಳಿಸುತ್ತಿರುವ ವಿಚಾರ ಸಿದ್ದರಾಮಯ್ಯ ಅವರಿಗೆ ಬೇಸರ ಮೂಡಿಸಿದ್ದು, ಸ್ಟಿಂಗ್ ನಡೆಸಿದ ವ್ಯಕ್ತಿಗಳನ್ನೂ ಬಂಧನ ಮಾಡದೆ ರಕ್ಷಿಸಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡಿದೆ. ಕೃಪಾ ಆಳ್ವಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆಯಾದರೂ ಅವರು ವಿದೇಶಕ್ಕೆ ತೆರಳುವುದಕ್ಕೆ ಪಕ್ಷದ ಕೆಲ ಪ್ರಭಾವಿಗಳೇ ಸಹಕಾರ ನೀಡಲಾಗಿದೆ ಎಂದು ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಬೆಂಗಳೂರಿನ ಶಾಸಕರೊಬ್ಬರ ಸಹಾಯದಿಂದ ಜಪಾನ್ ಮೂಲಕ ಅಮೆರಿಕಕ್ಕೆ ಕೃಪಾ ಆಳ್ವಾ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ ಬಣ ಸಂಗ್ರಹಿಸಿದೆ. ಸ್ಟಿಂಗ್ ಪ್ರಕರಣದ ಇನ್ನೊಬ್ಬ ಆರೋಪಿ ರಾಕೇಶ್ ಶೆಟ್ಟಿ ವಿರುದ್ಧ ಗುರುತರವಲ್ಲದ ಸೆಕ್ಷನ್ ಹಾಕಿ ಬಿಟ್ಟು ಕಳುಹಿಸಲಾಗಿದೆ.
ಯಾರನ್ನೂ ಬಂಧಿಸದೆ ತಮಗೆ ಕ್ಲೀನ್ ಚಿಟ್ ಕೊಟ್ಟು, ಸಾರ್ವಜನಿಕರ ದೃಷ್ಟಿಯಲ್ಲಿ ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಕೆಲ ಆಪ್ತ ಸಚಿವರ ಮುಂದೆ ಕೆಂಡಾಮಂಡಲವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಸ್ಟಿಂಗ್ ಕಾರಣವಾದ ನಿಗೂಢ ವ್ಯಕ್ತಿಯ ಬಗ್ಗೆಯೂ ಅವರು ಹೈಕಮಾಂಡ್ ಬಳಿ ಅವರು ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಹಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ಭೇಟಿ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲವನ್ನು ಸೃಷ್ಟಿಸಿದೆ.