Ankola: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ: ಆರೋಪಿ ಪೊಲೀಸ್ ವಶಕ್ಕೆ
ಅಂಕೋಲಾ: ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮೆರವಣಿಗೆಯ ವೇಳೆ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶಿಸಿರುವುದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರು ತಕ್ಷಣವೇ ಧ್ವಜವನ್ನು ವಶಪಡಿಸಿಕೊಂಡು ಪ್ರಾಥಮಿಕ ವಿಚಾರಣೆ ನಡೆಸಿದರು. ಬಳಿಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಮ್ಮದ್ ರಜಾ ಅಕ್ಬರ್ ಅಲಿ ಶೇಖ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಪಿಎಸ್‌ಐ ಗುರುನಾಥ ಹಾದಿಮನೆ ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಪಿಯನ್ನು ತಕ್ಷಣವೇ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುವ ಅಂಕೋಲಾ ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.