ಮಹಾರಾಷ್ಟ್ರದಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ಮರಾಠಿ ಕಲಿಯಲು ಮತ್ತೊಂದು ವರ್ಷ ಗಡುವು
ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡಲು ಸಾಧ್ಯವಾಗದ ಆಟೋ-ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಒಂದು ವರ್ಷದ ಹೆಚ್ಚುವರಿ ಕಾಲಾವಕಾಶ ನೀಡಿದೆ. ಮರಾಠಿ ಭಾಷೆ ಮಾತನಾಡಲು ಸಾಧ್ಯವಾಗದ ಚಾಲಕರ ಲೈಸೆನ್ಸ್ ಮತ್ತು ಪರ್ಮಿಟ್ ರದ್ದುಪಡಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸದ್ಯಕ್ಕೆ ತಡೆಹಿಡಿದಿದ್ದಾರೆ.
ಕೆಲವು ದಿನಗಳ ಹಿಂದೆ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮರಾಠಿ ಮಾತನಾಡಲು ಸಾಧ್ಯವಾಗದ ಚಾಲಕರ ಲೈಸೆನ್ಸ್ ಮತ್ತು ಪರ್ಮಿಟ್‌ಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದರು. ಇದೀಗ ಮುಖ್ಯಮಂತ್ರಿ ಫಡ್ನವೀಸ್ ಚಾಲಕರಿಗೆ ಮತ್ತೊಂದು ವರ್ಷ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಭಾಷಾ ಅರ್ಹತೆಯ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.