SSLC-PUC ಉತ್ತೀರ್ಣ ಅಂಕ ಇಳಿಕೆ; ಶಿಕ್ಷಣ ತಜ್ಞರಿಂದ ವಿರೋಧ
ಬೆಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಬದಲಾವಣೆಯಾಗಿ, ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತೇರ್ಗಡೆ ಅಂಕಗಳನ್ನು ಕಡಿತಗೊಳಿಸಿದೆ. ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣ ಅಂಕಗಳನ್ನು 35 ರಿಂದ 33 ಕ್ಕೆ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು 35 ರಿಂದ 30 ಕ್ಕೆ ಇಳಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು 35ರಿಂದ 33 ಮತ್ತು 30ಕ್ಕೆ ಇಳಿಸಿದ್ದೇವೆ. ನಾವು ಉತ್ತೀರ್ಣತೆಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು, ಸಿಬಿಎಸ್‌ಇ ಮತ್ತು ಇತರ ಮಂಡಳಿಗಳಿಗೆ ಹೊಂದಿಕೆಯಾಗುವ ಏಕರೂಪ ವ್ಯವಸ್ಥೆಯನ್ನು ಪರಿಚಯಿಸಲು ಬಯಸುತ್ತೇವೆ.