ಮಳೆಯನ್ನು ಲೆಕ್ಕಿಸದೆ ದೇವಿರಮ್ಮ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ: ಬೆಟ್ಟ ಏರಲು 2 ದಿನ ಅವಕಾಶ
ಚಿಕ್ಕಮಗಳೂರು (ಅ.20): ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗಾ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮಘಟ್ಟದ ತಪ್ಪಲಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆಯನ್ನು ಲೆಕ್ಕಿಸದೆ ಆಗಮಿಸಿ, ಬೆಳಗಿನ ಜಾವದ ಚಳಿ ಮತ್ತು ನಡೆಯುವ ದಾರಿಗೆ ಎದುರಾಗಿ ನಿಂತ ಮಂಜಿನ ಮುಸುಕನ್ನು ಸೀಳಿಕೊಂಡು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಭಕ್ತರು ಬೆಟ್ಟ ಏರತೊಡಗಿದರು. ರಾತ್ರಿ ಇಡೀ ಬಿದ್ದ ಮಳೆ ಹಿನ್ನೆಲೆಯಲ್ಲಿ ಬೆಟ್ಟ ಏರಲು ಭಕ್ತರಿಗೆ ಕಠಿಣ ಸವಾಲು ಎದುರಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಕೂಡ ಸರದಿ ಸಾಲಿನಲ್ಲಿ ತೆರಳಿದ ಸಾವಿರಾರು ಭಕ್ತರು ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯ ದರ್ಶನ ಪಡೆದು ಪುನೀತರಾದರು.