ಸ್ವಚ್ಛ ಮಂಗಳೂರು ಮತ್ತೆ ಮಲೀನ: ರಸ್ತೆಗಳಲ್ಲಿ ರಾಶಿ ಬಿದ್ದ ಕಸ, ಇದಕ್ಕೆ ಹೊಣೆ ಯಾರು
ಮಂಗಳೂರು (ಡಿ.22): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನಾಪತ್ತೆಯಾಗಿದ್ದ ಕಸದ ರಾಶಿಯ ‘ಬ್ಲ್ಯಾಕ್ ಸ್ಪಾಟ್’ಗಳು ಈಗ ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದು, ರಸ್ತೆ ಬದಿಗಳು ಕಸದ ಕೊಂಪೆಗಳಾಗುತ್ತಿವೆ. ಕಸ ಸಂಗ್ರಹ, ನಿರ್ವಹಣೆ ಯಾವುದೂ ಶಿಸ್ತುಬದ್ಧವಾಗಿ ನಡೆಯದೆ ಜನರು ಬವಣೆಪಡುವಂತಾಗಿದೆ.
ಈ ಹಿಂದೆ ಆಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪೆನಿಯು ಮಹಾನಗರ ಪಾಲಿಕೆಯ ಕಸ ಸಂಗ್ರಹ, ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಅನೇಕ ಕೊರತೆಗಳ ನಡುವೆಯೂ ಕಸ ಸಂಗ್ರಹ, ನಿರ್ವಹಣೆಯಲ್ಲಿ ದೊಡ್ಡ ಸಮಸ್ಯೆಗಳು ಇರಲಿಲ್ಲ. ಬ್ಲ್ಯಾಕ್ ಸ್ಪಾಟ್‌ಗಳೂ ಮಾಯವಾಗಿದ್ದವು. ಈ ಕಂಪೆನಿಯ ಗುತ್ತಿಗೆಯನ್ನು ನಿಲ್ಲಿಸಿದ ಬಳಿಕ ಪಾಲಿಕೆಯೇ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಿದೆ. ಕಸದ ಸಮಸ್ಯೆ ಅಲ್ಲಿಂದಲೇ ಮರಳಿ ಆರಂಭವಾಗಿದೆ.