ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, 20 ನಿಮಿಷದ ಬಳಿಕ 4ನೇ ಮಹಡಿಯಿಂದ ಜಂಪ್
ದೆಹಲಿಯ ದೆಹಲಿ ನಗರದ ಫರ್ಶ್ ಬಜಾರ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 22 ವರ್ಷದ ಯುವಕ ಮತ್ತು 20 ವರ್ಷದ ಯುವತಿ ಸಂತೋಷ್ ರೆಸಿಡೆನ್ಸಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿಕೊಂಡು ಒಳಹೋಗಿದ್ದರು. ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ತೀವ್ರವಾಗಿ ಬದಲಾಗಿದ್ದು, ನಾಲ್ಕನೇ ಮಹಡಿಯಲ್ಲಿದ್ದ ಕೊಠಡಿಯ ಕಿಟಕಿಯಿಂದ ಯುವತಿ ಕೆಳಕ್ಕೆ ಹಾರಿದ್ದಾಳೆ.
ತಕ್ಷಣವೇ ಸ್ಥಳೀಯರು ಮತ್ತು ಹೊಟೆಲ್ ಸಿಬ್ಬಂದಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಲಂದ್‌ಶಹರ್ ನಿವಾಸಿಯಾದ ಯುವಕ ಮತ್ತು ದೆಹಲಿಯ ಸುಂದರಿ ನಗರ ನಿವಾಸಿಯಾದ ಯುವತಿ ಹೊಟೆಲ್‌ಗೆ ತೆರಳಿದ್ದರು. ಕೊಠಡಿಗೆ ತೆರಳಿದ ನಂತರ ಇಬ್ಬರ ನಡುವೆ ಕೆಲ ವಿಚಾರಗಳ ಬಗ್ಗೆ ವಾಗ್ವಾದ ನಡೆದಿದ್ದು, ಅದು ತಾರಕಕ್ಕೇರಿದಂತೆ ತಿಳಿದುಬಂದಿದೆ.
ಈ ವಾಗ್ವಾದದ ಬೆನ್ನಲ್ಲೇ ಯುವತಿ ಆಕ್ರೋಶದಿಂದ ಕಿಟಕಿಯಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಫಾರೆನ್ಸಿಕ್ ತಂಡ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದೆ. ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಹೇಳಿಕೆ ಇನ್ನೂ ದಾಖಲಿಸಲಾಗಿಲ್ಲ. ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.