ಕರ್ನಾಟಕ ಬಿಜೆಪಿಗೆ ಮತ್ತೆ ‘ರಾಜಾಹುಲಿ’ ಕಳೆ.. ಒಂದೇ ಕಲ್ಲಲ್ಲಿ ಎರಡು ಗುರಿ..!
ಬರುವ ಫೆಬ್ರವರಿ 27 ರಂದು ಯಡಿಯೂರಪ್ಪ ಅವರ ಜನ್ಮದಿನವಿದ್ದು, ಅಂದೇ ಅಥವಾ ಮಾರ್ಚ್ ತಿಂಗಳಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆದಿದೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ. ರಾಜ್ಯ ರಾಜಕಾರಣದಲ್ಲಿ ‘ರಾಜಾಹುಲಿ’ ಎಂದೇ ಖ್ಯಾತರಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನಾಚರಣೆಗೆ ಬಿಜೆಪಿ ಬರ್ಜರಿ ತಯಾರಿ ನಡೆಸಿದೆ. ಕೇವಲ ಹುಟ್ಟುಹಬ್ಬವಷ್ಟೇ ಅಲ್ಲ, ಬಿಎಸ್‌ವೈ ಅವರು ಸಕ್ರಿಯ ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ‘ಸಿದ್ದರಾಮೋತ್ಸವ’ ಮಾದರಿಯಲ್ಲೇ ಬೃಹತ್ ಸಮಾವೇಶ ನಡೆಸಲು ಬಿಜೆಪಿ ಮತ್ತು ಬಿ.ವೈ. ವಿಜಯೇಂದ್ರ ಪಡೆ ಸಜ್ಜಾಗಿದೆ.
ಬರುವ ಫೆಬ್ರವರಿ 27 ರಂದು ಯಡಿಯೂರಪ್ಪ ಅವರ ಜನ್ಮದಿನವಿದ್ದು, ಅಂದೇ ಅಥವಾ ಮಾರ್ಚ್ ತಿಂಗಳಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆದಿದೆ.
ಒಂದೇ ಕಲ್ಲಲ್ಲಿ ಎರಡು ಹಕ್ಕಿ
ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಮಹೋತ್ಸವ (50 ವರ್ಷ) ಹಾಗೂ ಹುಟ್ಟುಹಬ್ಬವನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಮೂಲಕ ‘ಒಂದೇ ಕಲ್ಲಲ್ಲಿ ಎರಡು ಹಕ್ಕಿ’ ಹೊಡೆಯಲು ರಾಜ್ಯ ಬಿಜೆಪಿ ಘಟಕ ಪ್ಲಾನ್ ಮಾಡಿದೆ. ಚಿತ್ರದುರ್ಗ ಅಥವಾ ಬಾಗಲಕೋಟೆಯಲ್ಲಿ ಈ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ.
ಸಿದ್ದರಾಮೋತ್ಸವ ಮಾದರಿಯಲ್ಲಿ ‘ಯಡಿಯೂರಪ್ಪೋತ್ಸವ’
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನವನ್ನು ‘ಸಿದ್ದರಾಮೋತ್ಸವ’ ಎಂದು ಆಚರಿಸಲಾಗಿತ್ತು. ಅದು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಬೂಸ್ಟ್ ನೀಡಿತ್ತು. ಇದೀಗ ಅದೇ ಮಾದರಿಯಲ್ಲಿ ಯಡಿಯೂರಪ್ಪ ಅವರ ಸಾಧನೆ ಮತ್ತು ಸೇವೆಯನ್ನು ಮುಂದಿಟ್ಟುಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ಬಿಎಸ್‌ವೈ ಜನ್ಮದಿನದ ಆಚರಣೆಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೈಕಮಾಂಡ್ ನಾಯಕರೂ ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳು ಎದುರಾಗಲಿವೆ. ಈ ಎಲೆಕ್ಷನ್‌ಗೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಯಡಿಯೂರಪ್ಪ ಅವರ ಹೆಸರೇ ಮಂತ್ರವಾಗಲಿದೆ. ಬಿಎಸ್‌ವೈ ನಾಮಬಲದ ಮೂಲಕ ಮತ ಸೆಳೆಯಲು ಮತ್ತು ಪಕ್ಷ ಸಂಘಟನೆ ಮಾಡಲು ಈ ಸಮಾವೇಶ ಸಹಕಾರಿಯಾಗಲಿದೆ ಎಂಬುದು ನಾಯಕರ ಲೆಕ್ಕಾಚಾರ.
ಇದೆಲ್ಲದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಣತಂತ್ರವೂ ಅಡಗಿದೆ. ತಂದೆಯ ಹುಟ್ಟುಹಬ್ಬದ ನೆಪದಲ್ಲಿ ಬೃಹತ್ ಜನಸ್ತೋಮ ಸೇರಿಸಿ, ತಮ್ಮ ನಾಯಕತ್ವದ ಶಕ್ತಿ ಪ್ರದರ್ಶನ ಮಾಡಲು ವಿಜಯೇಂದ್ರ ಪ್ಲಾನ್ ಮಾಡಿದ್ದಾರೆ. ಈಗಾಗಲೇ ವಿಜಯೇಂದ್ರ ಬಣ ಈ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದು, ಬಾಗಲಕೋಟೆಯಲ್ಲಿ ಮಾರ್ಚ್ ತಿಂಗಳಲ್ಲಿ ಸಮಾವೇಶ ನಡೆಯುವ ಸಾಧ್ಯತೆ ದಟ್ಟವಾಗಿದೆ. ಒಟ್ಟಿನಲ್ಲಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆಗೆ ತರಲು ಕೇಸರಿ ಪಡೆ ಸಜ್ಜಾಗಿದೆ.