US Trade Deal: ಅಮೆರಿಕಕ್ಕೆ ಶರಣಾಗಿದ್ದು ಏಕೆ? ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಖರ್ಗೆ ಈ ಟೀಕೆ ಮಾಡಿದ್ದಾರೆ. 'ಇದು ಮೋದಿ ಸರ್ಕಾರದ 'ತಿಳುವಳಿಕೆ ಇಲ್ಲದ ವಿದೇಶಾಂಗ ನೀತಿಯೇ' ಅಥವಾ ಅಮೆರಿಕಕ್ಕೆ 'ಏಕಪಕ್ಷೀಯವಾಗಿ ಶರಣಾಗಿದ್ದಾರೆಯೇ' ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ 'X' ಖಾತೆಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, 'ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯದೆ, ಮೋದಿ ಸರ್ಕಾರ ಯಾಕೆ ಅವಸರವಾಗಿ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು?' ಎಂದು ಕೇಳಿದ್ದಾರೆ. ಈ ಒಪ್ಪಂದವನ್ನು 'ಟ್ರ್ಯಾಪ್ ಡೀಲ್' ಎಂದು ಕರೆದಿರುವ ಅವರು, ಇದರಿಂದ ಭಾರತಕ್ಕೆ ದೊಡ್ಡ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. 'ಈ ಒಪ್ಪಂದದ ಜಂಟಿ ಹೇಳಿಕೆಯಲ್ಲಿ, ಅಮೆರಿಕದ ಹಲವು ಉತ್ಪನ್ನಗಳ ಮೇಲೆ ಶೂನ್ಯ ಸುಂಕ, ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕದ ಸರಕುಗಳಿಗೆ ತೆರೆದಿಡುವುದು, 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಯೋಜನೆ, ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬದ್ಧತೆ ಮತ್ತು ಡಿಜಿಟಲ್ ತೆರಿಗೆಯಲ್ಲಿ ಹಲವು ವಿನಾಯಿತಿಗಳನ್ನು ನೀಡಲಾಗಿದೆ.
ಇದು ನಮ್ಮ ಇಂಧನ ಭದ್ರತೆಗೆ ಧಕ್ಕೆ ತರುತ್ತದೆ' ಎಂದು ಖರ್ಗೆ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಯಾರ ಒತ್ತಡಕ್ಕೆ ಮಣಿದು ಭಾರತದ ರಾಷ್ಟ್ರೀಯ ಹಿತಾಸಕ್ತಿ ಮತ್ತು ವ್ಯೂಹಾತ್ಮಕ ಸ್ವಾಯತ್ತತೆಯನ್ನು ರಾಜಿ ಮಾಡಿಕೊಂಡಿದ್ದೀರಿ ಎಂದು ಮೋದಿ ಅವರು ದೇಶದ ಜನರಿಗೆ ಸತ್ಯ ಹೇಳಬೇಕು. ಅದು ಎಪ್‌ಸ್ಟೀನ್ ಫೈಲ್ಸ್ ಒತ್ತಡವೇ? ನಮ್ಮ ರೈತರು, ಕಾರ್ಮಿಕರು, ಸಣ್ಣ ಉದ್ಯಮಗಳು ಮತ್ತು ವ್ಯಾಪಾರಿಗಳ ಹಿತಾಸಕ್ತಿ ಹಾಗೂ 140 ಕೋಟಿ ಭಾರತೀಯರ ಸ್ವಾಭಿಮಾನವನ್ನು ಕಾಪಾಡುವ ನ್ಯಾಯಯುತ ವ್ಯಾಪಾರ ಒಪ್ಪಂದವನ್ನು ಸರ್ಕಾರ ಮಾಡಲಿದೆಯೇ?" ಎಂದು ಖರ್ಗೆ ಆಗ್ರಹಿಸಿದ್ದಾರೆ.