ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ
ಅಂಡಮಾನ್: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ನಲ್ಲಿ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದೆ. ಪೈಲಟ್ ಸೇರಿದಂತೆ ಒಟ್ಟು ಏಳು ಜನರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಸಮುದ್ರದಲ್ಲಿ ಕಾಪ್ಟರ್ ಪತನವಾಗಿದ್ದು, ಎಲ್ಲಾ ಏಳು ಜನರನ್ನು ರಕ್ಷಣೆ ಮಾಡಲಾಗಿದೆ. ಪತನಕ್ಕೊಳಗಾಗಿರುವ ಹೆಲಿಕಾಪ್ಟರ್ ಪವನ್ ಹ್ಯಾನ್ಸ್‌ಗೆ ಸೇರಿದೆ. ಅಂಡಮಾನ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಇದರಿಂದ ಕೊಂಚವೂ ಗಲಿಬಿಲಿಗೊಳ್ಳದ ಪೈಲಟ್ ಹೆಲಿಕಾಪ್ಟರ್‌ನ್ನು ಸುರಕ್ಷಿತವಾಗಿ ಸಮುದ್ರದಲ್ಲಿ ಇಳಿಸಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದಾಗಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪವನ್ ಹ್ಯಾನ್ಸ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಹೆಲಿಕಾಪ್ಟರ್‌ನ್ನು ಸಮುದ್ರಕ್ಕೆ ಇಳಿಸುವ ಮುನ್ನವೇ ಪೈಲಟ್ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಮತ್ತು ಪರಿಹಾರ ತಂಡದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು. ಹೆಲಿಕಾಪ್ಟರ್ ಪತನವಾಗ್ತಿದ್ದಂತೆ ಸಮುದ್ರದಲ್ಲಿ ಸಿಲುಕಿದ್ದವರನ್ನು ರಕ್ಷಣಾ ತಂಡ ರಕ್ಷಿಸಿದೆ.
ಇಂದು ಬೆಳಗ್ಗೆ ಸರಿಸುಮಾರು 9:30 ರ ಸುಮಾರಿಗೆ, ಪವನ್ ಹನ್ಸ್ ಹೆಲಿಕಾಪ್ಟರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಯಾಬಂದರ್ ಬಳಿ ಲ್ಯಾಂಡಿಂಗ್ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ ಪೋರ್ಟ್ ಬ್ಲೇರ್ ನಿಂದ ಹೊರಟಿತ್ತು. ಇಬ್ಬರು ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಕರನ್ನು ಹೆಲಿಕಾಪ್ಟರ್ ಹೊತ್ತೊಯ್ಯುತ್ತಿತ್ತು. ಪೈಲಟ್ ಹೆಲಿಕಾಪ್ಟರ್ ಅನ್ನು ಅಂಡಮಾನ್ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಪವನ್ ಹನ್ಸ್ ಹೇಳಿದೆ.