ನೇಮಕಾತಿ ಪ್ರಕ್ರಿಯೆ ಇನ್ನು ಸುಗಮ-ಒಳಮೀಸಲು ಬಿಲ್‌ಗೆ ಕೊನೆಗೂ ಗೌರ್ನರ್ ಗೆಹಲೋತ್ ಅಂಕಿತ
ಬೆಂಗಳೂರು : ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವರ್ಗಿಕರಿಸಿ ಒಳಮೀಸಲಾತಿ ಕಲ್ಪಿಸುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ಮಸೂದೆ-2025ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕೊನೆಗೂ ಅಂಕಿತ ಹಾಕಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ವಿಳಂಬವಾಗಿದ್ದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲು ದಾರಿ ಸುಗಮವಾದಂತಾಗಿದೆ.
ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಸೇರಿ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಸಚಿವರ ನಿಯೋಗ ಗುರುವಾರ ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಒಳಮೀಸಲು ಮಸೂದೆಗೆ ಅಂಕಿತ ದೊರೆಯದೆ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಮನವರಿಕೆ ಮಾಡಿ ಆದಷ್ಟು ಬೇಗ ವಿಧೇಯಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕಿದ್ದು ಸರ್ಕಾರಕ್ಕೆ ಮಸೂದೆ ಕಳುಹಿಸಿಕೊಟ್ಟಿದ್ದಾರೆ.
ಸರ್ಕಾರ ಶೀಘ್ರದಲ್ಲೇ ಈ ಕಾಯ್ದೆ ಜಾರಿಗೆ ಅಧಿಕೃತ ರಾಜ್ಯಪತ್ರ ಹೊರಡಿಸಲಿದೆ.ಹಣ ಇಲ್ಲದ್ದಕ್ಕೆ ಒಳಮೀಸಲು ಗೊಂದಲ: ಕಾರಜೋಳಸರ್ಕಾರ ವಿರುದ್ಧ ಗೌರ್‍ನರ್‌ಗೆ ಬಿಜೆಪಿ ಒಳಮೀಸಲು ದೂರು
ಸರ್ಕಾರದ ಸ್ಪಷ್ಟೀಕರಣ ಒಪ್ಪಿ ಸಹಿ:
ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳ ಅನುಮೋದನೆ ಪಡೆದು ಈ ಮಸೂದೆಯನ್ನು ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳಹಿಸಿಕೊಡಲಾಗಿತ್ತು. ಆದರೆ, ಅವರು ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ವಾಪಸ್ ಕಳಿಸಿದ್ದರು. ಆದರೆ ಈ ಮಸೂದೆ ಕುರಿತು ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳ ಕಲ್ಯಾಣ ಸಂಘ ಮತ್ತು ಇತರೆ ಕೆಲ-ಸಂಘ ಸಂಸ್ಥೆಗಳು ಎತ್ತಿದ 14 ಆಕ್ಷೇಪಣೆಗಳಿಗೆ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟೀಕರಣ ಕೋರಿದ್ದರು. ಬಳಿಕ ಸರ್ಕಾರದ ಅಡ್ವೊಕೇಟ್ ಜನರಲ್ (ಎಜಿ) ಶಶಿ ಕಿರಣ್ ಶೆಟ್ಟಿ ಅವರ ಮೂಲಕ ಸ್ಪಷ್ಟನೆಗಳನ್ನು ಸಿದ್ಧಪಡಿಸಿ ಅದನ್ನು ಮಸೂದೆ ಜೊತೆಗೆ ರಾಜ್ಯಪಾಲರಿಗೆ ಕಳುಹಿಸಿತ್ತು.
ರಾಜ್ಯಪಾಲರ ಆಕ್ಷೇಪಣೆ-ಸರ್ಕಾರದ ಸ್ಪಷ್ಟೀಕರಣಗಳೇನು?:
ಪ.ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಲು ಸಂಸತ್ತಿನ ಅನುಮೋದನೆ ಅಗತ್ಯದ ಬಗ್ಗೆ ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದರು.
ಇದಕ್ಕೆ ಸರ್ಕಾರ ಅಸ್ತಿತ್ವದಲ್ಲಿರುವ ಮೀಸಲಾತಿ ಚೌಕಟ್ಟಿನೊಳಗೆ ಮಸೂದೆ ರೂಪಿಸಲಾಗಿದೆ. ಪ.ಜಾತಿ ಮೀಸಲಾತಿಯನ್ನು ಶೇ.17ಕ್ಕೆ, ಪ.ಪಂಗಡದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ)ಕಾಯ್ದೆ 2022ಕ್ಕೆ ರಾಷ್ಟ್ರಪತಿ, ಸಂಸತ್ತಿನ ಒಪ್ಪಿಗೆ ಅಥವಾ ರಾಷ್ಟ್ರಪತಿಯ ಯಾವುದೇ ಆಕ್ಷೇಪಣೆ ಇಲ್ಲದೆ ರಾಜ್ಯಪಾಲರೇ ಅಂಕಿತ ಹಾಕಿದ್ದಾರೆ. ಈ ಕಾಯ್ದೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ ಕಾಯ್ದೆಯು ಸಂವಿಧಾನಬಾಹಿರವೆಂದು ಹೇಳಿಲ್ಲ. ಹೀಗಾಗಿ ಪ.ಜಾತಿಗೆ ಶೇ.17 ಮೀಸಲಾತಿ ನೀಡಲಾಗುತ್ತಿದ್ದು, ಈ ಜಾತಿಗಳಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಮೀಸಲಾತಿಯನ್ನು ಸರ್ಕಾರ ಮರು ವರ್ಗೀಕರಣ ಮಾಡಿದೆ. ಇದಕ್ಕೆ ವಿಧಾನ ಮಂಡಲವೂ ಅನುಮೋದನೆ ನೀಡಿದೆ ಎಂದು ವಿವರಿಸಿತ್ತು.
ಮೀಸಲಾತಿ ಶೇಕಡವಾರು ಪ್ರಮಾಣ ನಿರ್ಧರಿಸುವ ಅಧಿಕಾರಕ್ಕಿಂತ ಉಪ ವರ್ಗೀಕರಣದ ಅಧಿಕಾರ ಭಿನ್ನವಾಗಿದೆ. ಪಂಜಾಬ್ ಸರ್ಕಾರ ಹಾಗೂ ದೇವೀಂದರ್ ಸಿಂಗ್ ನಡುವಿನ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಂವಿಧಾನದ ವಿಧಿ 14, 15(4) ಮತ್ತು 16(4)ರ ಅಡಿ ಒಳ ಮೀಸಲಾತಿ ಜಾರಿಗೊಳಿಸುವ ರಾಜ್ಯದ ಅಧಿಕಾರವನ್ನು ಎತ್ತಿಹಿಡಿದಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರ ಅಂಗೀಕರಿಸಿದ ಯಾವುದೇ ಶಾಸನ ಜಾರಿಗೊಂಡ ಬಳಿಕ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ.
ಆದ್ದರಿಂದ ಶಾಸಕಾಂಗದ ಕ್ರಮವನ್ನು ಲೆಕ್ಕಿಸದೆ ನ್ಯಾಯಾಂಗದ ಮೇಲ್ವಿಚಾರಣೆ ಕಾರ್ಯವಿಧಾನ ಹಾಗೇ ಉಳಿದಿದೆ. ಆದಾಗ್ಯೂ ನ್ಯಾಯಾಂಗ ಪರಿಶೀಲನೆಯ ನಿರೀಕ್ಷೆ ರಾಜ್ಯದ ಶಾಸಕಾಂಗದ ಸಾಮರ್ಥ್ಯ ಕಸಿದುಕೊಳ್ಳುವುದಿಲ್ಲ. ನ್ಯಾಯಾಂಗ ಪರೀಶೀಲನೆಯ ಪರಿಹಾರ ಒಂದು ರಕ್ಷಣೆಯಾಗಿದೆ ಮತ್ತು ಶಾಸಕಾಂಗ ಪ್ರಕ್ರಿಯೆಗೆ ಅಡ್ಡಿಯಲ್ಲ ಎಂದು ಸರ್ಕಾರ ತಿಳಿಸಿತ್ತು.
ಪ.ಜಾತಿ ಪಟ್ಟಿಯಲ್ಲಿರುವ ಕೆಲ ಜಾತಿಗಳ ಪ್ರಾತಿನಿಧ್ಯದ ಕೊರತೆ ಮನಗಂಡು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಮರು ವರ್ಗೀಕರಣ ಮಾಡಲಾಗಿದೆ. ನ್ಯಾಯಮೂರ್ತಿ ಎನ್.ಎನ್.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗವು ಪ.ಜಾತಿಗಳ ಸಮೀಕ್ಷೆಯಡಿ ಸಂಗ್ರಹಿಸಲಾದ ದತ್ತಾಂಶಗಳನ್ನು ಪರಿಶೀಲಿಸಿ, ತಜ್ಞರ ನೆರವು ಪಡೆದು ವರದಿ ಸಲ್ಲಿಸಿದೆ. ವರದಿ ಯಾವುದೇ ಒಂದು ಸಮುದಾಯದ ವಿರುದ್ಧವಾಗಿಲ್ಲ. ಆಯೋಗದ ವರದಿ ಕುರಿತು ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಚರ್ಚಿಸಿ, ವರದಿಯಲ್ಲಿ ಕೆಲ ಗೊಂದಲಗಳನ್ನು ಪರಿಹರಿಸಲು ನಿರ್ಧರಿಸಿತು. ಸಂಪುಟವು ತನ್ನದೇ ವಿವೇಚನೆಯಿಂದ 101 ಪರಿಶಿಷ್ಟ ಜಾತಿಗಳ ಹಿತಾಸಕ್ತಿ ಗಮನದಲ್ಲಿಟ್ಟು ಮೂರು ಗುಂಪುಗಳಾಗಿ ವರ್ಗೀಕರಿಸಿ, ಮೀಸಲಾತಿ ಹಂಚಿಕೆಯ ನ್ಯಾಯಯುತ ನಿರ್ಧಾರ ತೆಗೆದುಕೊಂಡಿದೆ.