ಅಣ್ಣಾಮಲೈ 'ಕಿಂಗ್ ಮೇಕರ್' ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?
ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರ 'ಕಿಂಗ್ ಮೇಕರ್' ಅವತಾರ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಲಿದೆ? ಎಐಎಡಿಎಂಕೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳುವುದೇ ಎಂಬ ಕುತೂಹಲ ಹೆಚ್ಚಾಗಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣಾ ಕಣ ಈಗಲೇ ಬಿಸಿಯಾಗಿದೆ. ಅದರಲ್ಲೂ, ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರ ರಾಜಕೀಯ ನಡೆಗಳು ಬಿರುಗಾಳಿ ಎಬ್ಬಿಸಿವೆ. ಮುಂಬರುವ ಚುನಾವಣೆಯಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಬೇಕೆಂದು ಹೈಕಮಾಂಡ್ ಅಣ್ಣಾಮಲೈಗೆ ಸೂಚಿಸಿತ್ತು. ಇದಕ್ಕಾಗಿ ಮೊಡಕುರಿಚಿ ಅಥವಾ ಗೌಂಡಂಪಾಳಯಂ ಕ್ಷೇತ್ರಗಳನ್ನು ಗುರುತಿಸಲಾಗಿತ್ತು. ಆದರೆ ಅಣ್ಣಾಮಲೈ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ.
ದೆಹಲಿ ನಾಯಕರ ಮುಂದೆ ಅಣ್ಣಾಮಲೈ ತಾರ್ಕಿಕ ವಾದವೊಂದನ್ನು ಮಂಡಿಸಿದ್ದಾರೆ. "ಈ ಬಾರಿ ನಾನು ಸ್ಪರ್ಧಿಸಿದರೆ ಗೆಲ್ಲುವುದು ಖಚಿತ. ಆದರೆ, ಎಐಎಡಿಎಂಕೆ ಮೈತ್ರಿಯಲ್ಲಿ ನಾನೊಬ್ಬ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದರೆ, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮೈತ್ರಿ ಧರ್ಮದ ಹೆಸರಲ್ಲಿ ಎಐಎಡಿಎಂಕೆ ಕಾರ್ಯಗಳಿಗೆ ಅಡ್ಡಿಪಡಿಸಲು ಅಥವಾ ಅವರನ್ನು ವಿಮರ್ಶಿಸಲು ಆಗುವುದಿಲ್ಲ. ಇದು ನನಗೆ ಧರ್ಮಸಂಕಟ ತರುತ್ತದೆ" ಎಂದು ಅವರು ನೇರವಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಬದಲಿಗೆ, ಕೊಂಗು ವಲಯದ ಸುಮಾರು 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸುವ ಪ್ರಚಾರದ ಜವಾಬ್ದಾರಿಯನ್ನು ತಮಗೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.
"ಗೆಲ್ಲುವ ಕುದುರೆಗಳನ್ನು ನಾನು ಗುರುತಿಸುತ್ತೇನೆ" ಎಂದು ಅಣ್ಣಾಮಲೈ ಅಖಾಡಕ್ಕಿಳಿದಿರುವುದು ಕೇವಲ ಚುನಾವಣಾ ತಂತ್ರವಲ್ಲ. ಇದು 2026ರ ನಂತರದ ತಮಿಳುನಾಡು ರಾಜಕೀಯದಲ್ಲಿ ಬಿಜೆಪಿಯನ್ನು ಪ್ರಮುಖ ವಿರೋಧ ಪಕ್ಷವಾಗಿ ಮಾಡುವ ಪ್ರಯತ್ನ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.ಅಣ್ಣಾಮಲೈ ಅವರ ಈ 'ಕಿಂಗ್ ಮೇಕರ್' ನಡೆ ಕೊಂಗು ವಲಯದಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ? ಎಐಎಡಿಎಂಕೆ ತನ್ನ ಕೋಟೆ ಉಳಿಸಿಕೊಳ್ಳುವುದೇ ಅಥವಾ ಬಿಜೆಪಿ ತನ್ನ ಹೆಜ್ಜೆಗುರುತನ್ನು ಇನ್ನಷ್ಟು ಬಲಪಡಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕು.