ಬೆಂಗಳೂರಲ್ಲಿ ಓದಿದ ಹುಡುಗ, ಮಾಜಿ ಮೇಯರ್ ಬಾಲೆನ್ ಷಾ ನೇಪಾಳದ ಮುಂದಿನ ಪ್ರಧಾನಿ
ಕಾಠ್ಮಂಡು (ಮಾ.7): ಜೆನ್ ಝೀಗಳ ಹಿಂಸಾಚಾರದ ಬಳಿಕ ನೇಪಾಳದಲ್ಲಿ ನಡೆದ ಮೊದಲ ಎಲೆಕ್ಷನ್‌ನಲ್ಲಿ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಬಾಲೇಂದ್ರ ಶಾ ಗೆದ್ದು ಬೀಗಿದ್ದು ಪ್ರಧಾನಿ ಹುದ್ದೆಯತ್ತ ಹೆಜ್ಜೆ ಇಟ್ಟಿದ್ದಾರೆ. ಕೆ.ಪಿ. ಒಲಿ ಶರ್ಮಾ ಸರ್ಕಾರದ ಪತನದ ಬಳಿಕ ಮಾ.5ರಂದು ಸಾರ್ವತ್ರಿಕ ಚುನಾವಣೆ ನಡೆದಿದ್ದು ಸೋಮವಾರ ಫಲಿತಾಂಶ ಹೊರ ಬಿದ್ದಿದೆ. ಅದರಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಪೂರ್ಣ ಬಹುಮತ ಪಡೆದು ಅಧಿಕಾರಕ್ಕೇರಿದೆ. ಇದರಲ್ಲಿ ಒಟ್ಟು 94 ಕ್ಷೇತ್ರಗಳಲ್ಲಿ 70 ಕ್ಷೇತ್ರಗಳಲ್ಲಿ ಆರ್‌ಎಸ್‌ಪಿ ಜಯಭೇರಿ ಬಾರಿಸಿದೆ. ಉಳಿದಂತೆ ನೇಪಾಳಿ ಕಾಂಗ್ರೆಸ್, ಸಿಪಿಎನ್- ಯುಎಂಎಲ್, ನೇಪಾಳಿ ಕಮ್ಯೂನಿಸ್ಟ್ ಪಕ್ಷಗಳು ತಲಾ 6 ಕ್ಷೇತ್ರಗಳಲ್ಲಿ ಗೆಲುವು ಪಡೆದಿವೆ.
ಬಾಲೇಂದ್ರ ಶಾ ಇದಕ್ಕೂ ಮುನ್ನ ಕಾಠ್ಮಂಡು ನಗರದ ಮೇಯರ್ ಆಗಿದ್ದರು. ಬಾಲೆನ್ ಅಂತಲೇ ಜನಪ್ರಿಯರಾಗಿದ್ದ ಇವರು ರಾಜಕಾರಣಕ್ಕೆ ಬರುವ ಮುನ್ನ ರ್‍ಯಾಪರ್ ಆಗಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಚುನಾವಣೆಯಲ್ಲಿ 4 ಸಲ ಪ್ರಧಾನಿಯಾಗಿದ್ದ ಒಲಿ ವಿರುದ್ಧ 4842 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಶಾ ಬೆಳಗಾವಿಯ ವಿಟಿಯು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ನಿಟ್ಟೆ ಕಾಲೇಜಿನಲ್ಲಿ ಎಂಟೆಕ್ ಪೂರ್ಣಗೊಳಿಸಿದ್ದರು.
2016 ರಿಂದ 2018ರವರೆಗೆ ಬೆಳಗಾವಿ ವಿಟಿಯು ಅಡಿಯಲ್ಲಿ ಬರುವ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMIT) ನಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ (M.Tech) ಪದವಿ ಪಡೆದಿದ್ದರು.
ಆರ್‌ಎಸ್‌ಪಿ ಪಕ್ಷವನ್ನು ಕೇವಲ ನಾಲ್ಕು ವರ್ಷಗಳ ಹಿಂದೆ ಮಾಜಿ ಪತ್ರಕರ್ತ ರಬಿ ಲಾಮಿಚಾನೆ ಸ್ಥಾಪಿಸಿದರು. ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಪಕ್ಷ ಸಿಪಿಎನ್-ಯುಎಂಎಲ್ ಇಲ್ಲಿಯವರೆಗೆ ಕೆಲವೇ ಸ್ಥಾನಗಳನ್ನು ಗೆದ್ದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ, ಮಾರ್ಚ್ 5 ರಂದು ನಡೆದ ಚುನಾವಣೆಯಲ್ಲಿ 58% ಮತದಾರರು ತಮ್ಮ ಮತಗಳನ್ನು ಚಲಾಯಿಸಿದರು. ಎಣಿಕೆಯು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಮಾರ್ಚ್ 9 ರೊಳಗೆ ಎಣಿಕೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.