ರಾಜ್ಯ ಬಜೆಟ್ | ಮೈಸೂರಿಗೆ ಬಂಪರ್: ಹಲವು ಕೊಡುಗೆ, ಘೋಷಣೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2026–27ನೇ ಸಾಲಿನ ಬಜೆಟ್‌ನಲ್ಲಿ ತವರು ಮೈಸೂರು ಜಿಲ್ಲೆಗೆ ಹಲವು ಕೊಡುಗೆಗಳ ‘ಬಾಗಿನ’ವನ್ನು ನೀಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಸಿಲ್ಕ್ ಪಾರ್ಕ್ ನಿರ್ಮಾಣ, ‘ಷ್ನೈಡರ್ ಎಲೆಕ್ಟ್ರಿಕ್ ಯೂತ್ ಇಂಪ್ಯಾಕ್ಟ್ ಕೇಂದ್ರ’ದಂಥ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಮೈಸೂರು ನಗರ ಕೇಂದ್ರಿತವಾದ ಘೋಷಣೆಗಳು ಹೆಚ್ಚು. ಹೊಸ ತಾಲ್ಲೂಕುಗಳಾದ ಸರಗೂರು ಹಾಗೂ ಸಾಲಿಗ್ರಾಮದ ಪ್ರಸ್ತಾಪವೇ ಇಲ್ಲ. ಬಹುಬೇಡಿಕೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಪಾರಂಪರಿಕ ಕಟ್ಟಡಗಳಿಗೆ ಅನುದಾನದ ಬೇಡಿಕೆಯ ಬಗ್ಗೆ ಚಕಾರವನ್ನೆತ್ತಿಲ್ಲ. ಬೃಹತ್ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ) ರಚನೆಗೆ ತಕ್ಕಂತೆ ಅನುದಾನದ ಪ್ರಸ್ತಾಪವಿಲ್ಲ. ಆರೋಗ್ಯ ಕ್ಷೇತ್ರ, ಸೌಕರ್ಯ ಹಾಗೂ ಯುವಜನರ ಭವಿಷ್ಯ ರೂಪಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ತಾವು ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೆ ಕೆಲವು ಯೋಜನೆಗಳನ್ನು ಕೊಟ್ಟಿದ್ದಾರೆ.