ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಬಜೆಟ್ ಪಾಠ
ಕೇಂದ್ರ ಸರ್ಕಾರ ನಮಗೆ ಬರಬೇಕಿರುವ ನ್ಯಾಯಯುತ ಅನುದಾನ ನೀಡದ ಹಿನ್ನೆಲೆಯಲ್ಲಿ ಕೊರತೆ ಬಜೆಟ್ ಮಂಡನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಆದರೂ, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ನಿಯಮ ಪಾಲನೆ ಮೂಲಕ ಉತ್ತಮ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನ ಮಂಡಲದಿಂದ ಸೋಮವಾರ ಏರ್ಪಡಿಸಲಾಗಿದ್ದ ಆಯವ್ಯಯ, ರಾಜಸ್ವಗಳ ಸಂಗ್ರಹಣೆ, ಅನುದಾನಗಳ ವರ್ಗೀಕರಣ ಹಾಗೂ ಆಯವ್ಯಯ ಅನುದಾನಗಳ ಬಳಕೆ ಮತ್ತು ನಿರ್ವಹಣೆ ಕುರಿತು ಶಾಸಕರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
2026-27ನೇ ಸಾಲಿಗೆ ₹4.48 ಲಕ್ಷ ಕೋಟಿ ಬಜೆಟ್ ಮಂಡಿಸಲಾಗಿದೆ. 2025-26ನೇ ಸಾಲಿನಲ್ಲಿ ₹19 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಲಾಗಿತ್ತು
. 2026-27ನೇ ಸಾಲಿನಲ್ಲಿ ₹22 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಲಾಗಿದ್ದು, ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಂತೆ ಶೇ.3ಕ್ಕಿಂತ ಒಳಗಿದೆ. ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಿದ್ದ ಅನುದಾನ ಕೊರತೆಯೇ ಈ ಕೊರತೆ ಬಜೆಟ್‌ಗೆ ಕಾರಣ. ಇನ್ನು ಜಿಎಸ್‌ಟಿ ಸರಳೀಕರಣಕ್ಕೂ ಮುನ್ನ ಜಿಎಸ್‌ಟಿ ಬೆಳವಣಿಗೆ ದರ ಶೇ.10ರಷ್ಟಿತ್ತು. ಅದು ಈಗ ಶೇ.4ಕ್ಕೆ ಕುಸಿದಿದೆ. ಅದೇ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಅದು ಮೈನಸ್‌ಗೆ ತಲುಪಿದೆ. ಆದರೂ, ಆರ್ಥಿಕ ಶಿಸ್ತು ಕಾಪಾಡುವಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಅದು ಬಜೆಟ್‌ನಲ್ಲಿ ಪ್ರತಿಬಿಂಬಿತವಾಗಿದೆ ಎಂದರು.