ಎಕರೆಗಟ್ಟಲೆ ಜಾಗದಲ್ಲಿ ಕನ್ವೆನ್ಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ; ಪರಿಸರವಾದಿರಳು ಗರಂ!
ಮಲ್ಲೇಶ್ವರಂನ ಮೈಸೂರು ಲ್ಯಾಂಪ್ ವರ್ಕರ್ಸ್ ಲಿಮಿಟೆಡ್‌ನ 22 ಎಕರೆ ಭೂಮಿಯಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಾಣ ಯೋಜನೆ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯು ನಗರದ ಅಭಿವೃದ್ಧಿಗೆ ಅಗತ್ಯ ಎಂದು ಸರ್ಕಾರ ಹೇಳಿದ್ದರೆ, ಪರಿಸರವಾದಿಗಳು ಸಾವಿರಾರು ಮರಗಳ ಕಡಿತದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಸಿರು ಪ್ರದೇಶವನ್ನು ಉಳಿಸಿ ಸಾರ್ವಜನಿಕ ಉದ್ಯಾನವನವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಅವರ ಆಗ್ರಹವಾಗಿದೆ.
ಬೆಂಗಳೂರು, ಮಾರ್ಚ್ 10: ಮಲ್ಲೇಶ್ವರದಲ್ಲಿರುವ (Malleshwaram) ಮೈಸೂರು ಲ್ಯಾಂಪ್ ವರ್ಕರ್ಸ್ ಲಿಮಿಟೆಡ್ ಪ್ರದೇಶದಲ್ಲಿ ಸಾವಿರಾರು ಮರಗಳಿರುವ ಹಚ್ಚಹಸಿರು ವಾತಾವರಣದ ನಡುವೆ ದೊಡ್ಡ ಮಟ್ಟದ ಕಟ್ಟಡ ನಿರ್ಮಾಣದ ಯೋಜನೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ನಗರದ ಅಭಿವೃದ್ಧಿಗೆ ಈ ಯೋಜನೆ ಅಗತ್ಯವಾಗಿದ್ದು, ಎಲ್ಲಾ ಅಂಶಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗೆ ಬಲಿಯಾಗುತ್ತವೆ ಸಾವಿರಾರು ಮರಗಳು
ಹಲವು ವರ್ಷಗಳಿಂದ ಬಳಕೆಯಾಗದೆ ಇರುವ ಈ ಸುಮಾರು 22 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಸೆಂಟರ್, ಎಕ್ಸಿಬಿಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ಹಾಗೂ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಇತ್ತೀಚಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕೂಡ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಸುಮಾರು 10 ಸಾವಿರ ಮಂದಿ ಒಂದೇ ಸಮಯದಲ್ಲಿ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವ ಸುಸಜ್ಜಿತ ಕನ್ವೆನ್ಷನ್ ಸೆಂಟರ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಸಮಾವೇಶಗಳು ನಡೆಯಲು ಬೆಂಗಳೂರಿನಲ್ಲಿ ಸೂಕ್ತ ಸೌಲಭ್ಯಗಳ ಕೊರತೆ ಇದೆ ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟಿದೆ. ಆದರೆ ಈ ಯೋಜನೆ ಜಾರಿಯಾಗಬೇಕಾದರೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಹೆಚ್ಚಾಗಿದೆ.