Good News: ಬರೋಬ್ಬರಿ ₹60 ಕೋಟಿ ಆದಾಯ; ರೈತರಿಗೆ, ಉದ್ಯೋಗಿಗಳಿಗೆ ಯುಗಾದಿ ಗಿಫ್ಟ್ ಘೋಷಿಸಿದ ಬಮೂಲ್!
ಬೆಂಗಳೂರು ಸಹಕಾರಿ ಹಾಲು ಒಕ್ಕೂಟ BAMUL 60 ಕೋಟಿ ಲಾಭ ಗಳಿಸಿದೆ. ಡಿಕೆ ಸುರೇಶ್ ಅವರ ಪ್ರಕಾರ, 1,27,644 ರೈತರಿಗೆ 59.39 ಕೋಟಿ ಮೀಸಲು ಈಡಲಾಗಿದೆ. ನಂದಿನಿ ಹಾಲು ಗುಣಮಟ್ಟಕ್ಕೆ ಎಐ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ (Bengaluru Cooperative Milk Union Ltd) ರೈತರಿಗೆ (Farmers) ಯುಗಾದಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬಮೂಲ್ (BAMUL) 60 ಕೋಟಿ ರೂಪಾಯಿ ಅಂದಾಜು ಲಾಭ ಬಳಿಸಿದೆ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ (DK Suresh) ತಿಳಿಸಿದ್ದಾರೆ. ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 14.5 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದ ಸಂಸ್ಥೆ ಈ ಬಾರಿ ಲಾಭದ ಹಾದಿಗೆ ಮರಳಿದೆ.
ಬೆಂಗಳೂರಿನ ಆಡುಗೋಡಿಯಲ್ಲಿರುವ ಬೆಂಗಳೂರು ಡೈರಿ ಕಚೇರಿಯಲ್ಲಿ ಇಂದು ಡಿಕೆ ಸುರೇಶ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಈ ವರ್ಷ ಮಂಡಳಿಯಲ್ಲಿ ಮಾಡಿರುವ ಸುಧಾರಣೆಗಳು ಹಾಗೂ ಹಾಲು ಸಂಗ್ರಹಣೆ ಸೇರಿದಂತೆ ಸಂಸ್ಥೆಯ ವಹಿವಾಟು ಹೆಚ್ಚಳದ ಬಗ್ಗೆ ಮಾಹಿತಿ ಹಂಚಿಕೊಂಡರು. ಕಳೆದ ವರ್ಷ ಬಮೂಲ್ 2,900 ಕೋಟಿ ರೂಪಾಯಿ ಅಷ್ಟು ವಹಿವಾಟು ನಡೆಸಿತ್ತು. ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆ ಇತ್ತು. ಇದರಂತೆ ಸುಮಾರು 500 ಕೋಟಿ ರೂಪಾಯಿ ವಹಿವಾಟು ಹೆಚ್ಚಳ ಆಗಿದ್ದು, ದೈನಂದಿನ ಹಾಲು ಸಂಗ್ರಹ ಸರಾಸರಿ 1.5 ಲಕ್ಷ ಲೀಟರ್ ಗೆ ಹೆಚ್ಚಳವಾಗಿದೆ. ಒಟ್ಟು ಸರಾಸರಿ 16.5 ಲಕ್ಷ ಲೀಟರ್ ಗೆ ತಲುಪಿದೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.