ತಿರುಪತಿ ದೇವಸ್ಥಾನ: ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಿಲ್ಲ: ಅಧಿಕಾರಿಗಳ ಸ್ಪಷ್ಟನೆ
ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಲಡ್ಡು ಪ್ರಸಾದ ಮತ್ತು ಅನ್ನದಾನ ಘಟಕಗಳಿಗೆ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ. ತಿರುಮಲದಲ್ಲಿ ಪ್ರತಿದಿನ ಸರಾಸರಿ 4 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ಹಬ್ಬದ ದಿನಗಳಲ್ಲಿ ಈ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗುತ್ತದೆ. ಲಡ್ಡು ಮತ್ತು ಅನ್ನದಾನ ಘಟಕಗಳಿಗೆ ದಿನಕ್ಕೆ ಸುಮಾರು 10 ಟನ್‌ಗಳಿಗಿಂತ ಹೆಚ್ಚು ಅನಿಲದ ಅಗತ್ಯವಿದ್ದು, ಯಾವುದೇ ಕೊರತೆಯಿಲ್ಲದೆ ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅನಿರೀಕ್ಷಿತ ವ್ಯತ್ಯಯ ತಡೆಯಲು ಒಂದು ವಾರಕ್ಕೆ ಆಗುವಷ್ಟು ಅಡುಗೆ ಅನಿಲದ ಸಂಗ್ರಹವನ್ನು ಕಾಯ್ದಿರಿಸಲಾಗಿದೆ. ಮುಖ್ಯ ಅನ್ನದಾನ ಕೇಂದ್ರದಲ್ಲಿ ನಿತ್ಯ 75,000 ಜನರಿಗೆ ಊಟ ತಯಾರಿಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳು ಸೇರಿ ಒಟ್ಟು 2.25 ಲಕ್ಷ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಲಡ್ಡು ತಯಾರಿಕೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆಯಾಗುತ್ತಿದ್ದು, ಇತರ ಘಟಕಗಳಿಗೆ ಸಿಲಿಂಡರ್‌ಗಳನ್ನು ಬಳಸಲಾಗುತ್ತಿದೆ. ಭಕ್ತರು ಎಂದಿನಂತೆ ಯಾವುದೇ ನಿರ್ಬಂಧವಿಲ್ಲದೆ ಲಡ್ಡು ಪ್ರಸಾದವನ್ನು ಪಡೆಯಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.