ಪಂಚರಾಜ್ಯ ಚುನಾವಣೆ ಘೋ಼ಷಣೆ
ನವದೆಹಲಿ: ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದ್ದರೆ, ಏ.29ರಂದು ಕಡೆಯ ಹಂತದ ಮತದಾನ ನಡೆಯಲಿದ್ದು ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.ಅಂತೆಯೇ ಕರ್ನಾಟಕದ 2 ಸೇರಿದಂತೆ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಭಾನುವಾರ ಚುನಾವಣಾ ದಿನಾಂಕ ಪ್ರಕಟಿಸಿದ್ದು. ಅಲ್ಲೂ ಮೇ 4ಕ್ಕೇ ಮತ ಎಣಿಕೆ ನಡೆಯಲಿದೆ.
ಕಳೆದ ಬಾರಿ 8 ಹಂತ ಕಂಡಿದ್ದ ಬಂಗಾಳದಲ್ಲಿ ಈ ಬಾರಿ ಕೇವಲ 2 ಹಂತದ ಮತದಾನ ನಡೆಯುವುದು ವಿಶೇಷ. ಈ ಚುನಾವಣೆಯು ಪ.ಬಂಗಾಳದಲ್ಲಿ ಟಿಎಂಸಿ, ಬಿಜೆಪಿ, ಎಡರಂಗಕ್ಕೆ, ಅಸ್ಸಾಂನಲ್ಲಿ ಕಾಂಗ್ರೆಸ್, ಬಿಜೆಪಿಗೆ, ಕೇರಳದಲ್ಲಿ ಎಡರಂಗ, ಯುಡಿಎಫ್ ಹಾಗೂ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಲಿದೆ. ತಮಿಳುನಾಡಲ್ಲಿ ಬಿಜೆಪಿ-ಅಣ್ಣಾಡಿಎಂಕೆ ಕೂಟ, ಡಿಎಂಕೆ-ಕಾಂಗ್ರೆಸ್ ಕೂಟ, ವಿಜಯ್ ನೇತೃತ್ವದ ಟಿವಿಕೆ, ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರ ಪಕ್ಷಗಳ ನಡುವೆ ಬಹುಕೋನ ಕದನಕ್ಕೆ ಕಾರಣವಾಗಲಿದೆ. ಪುದುಚೇರಿಯಲ್ಲಿ ಬಿಜೆಪಿ-ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್-ಡಿಎಂಕೆ ಕೂಟಗಳ ನಡುವೆ ಸಂಘರ್ಷ ನಡೆಯಲಿದೆ.
ಕೇವಲ 20 ದಿನದ ಅವಧಿಯಲ್ಲಿ ಚುನಾವಣೆ:
5 ವರ್ಷಗಳ ಹಿಂದೆ ಕೋವಿಡ್ ಅವಧಿಯಲ್ಲಿ ಈ 5 ರಾಜ್ಯಗಳಿಗೆ 30 ದಿನಗಳ ಅವಧಿಯಲ್ಲಿ ಒಟ್ಟು 8 ದಿನಗಳ ಕಾಲ ಚುನಾವಣೆ ನಡೆದಿದ್ದರೆ, ಈ ಬಾರಿ 20 ದಿನಗಳ ಅವಧಿಯಲ್ಲಿ ಕೇವಲ 3 ದಿನಗಳಲ್ಲೇ ಚುನಾವಣೆ ಮುಗಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಗೆ ಒಂದೇ ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.
ಎಲ್ಲೆಲ್ಲಿ ಎಂದು?:
ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ ಏ.23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏ.23 ಮತ್ತು 29ರಂದು ಮತದಾನ ನಡೆಯಲಿದೆ. 5 ರಾಜ್ಯಗಳ ಒಟ್ಟು 824 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು 17.4 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.