ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ
ಯುದ್ಧಭೂಮಿಯಲ್ಲಿ ಇಸ್ರೇಲ್‌ನ ಅತ್ಯಾಧುನಿಕ ರೇಡಾರ್‌ಗಳನ್ನೇ ಚಕಿತಗೊಳಿಸುವಂತಹ ಹೊಸ ಅಸ್ತ್ರವನ್ನು ಇರಾನ್ ಪ್ರಯೋಗಿಸಿದೆ! ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ‘ಸೆಜ್ಜಿಲ್’ ಎಂಬ ‘ಡ್ಯಾನ್ಸಿಂಗ್ ಮಿಸೈಲ್’ ಅನ್ನು ಇರಾನ್ ಉಡಾವಣೆ ಮಾಡಿದ್ದು, ಇದು ಇಡೀ ಜಗತ್ತಿನ ಗಮನ ಸೆಳೆದಿದೆ. ಅಷ್ಟಕ್ಕೂ ಈ ಸೆಜ್ಜಿಲ್ ಎಷ್ಟು ವೇಗವಾಗಿ ಚಲಿಸುತ್ತದೆ? ಇಸ್ರೇಲ್ ಏಕೆ ಇದರ ಬಗ್ಗೆ ಆತಂಕಗೊಂಡಿದೆ? ಇದರ ವಿಶೇಷವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. ನವದೆಹಲಿ, ಮಾರ್ಚ್ 16: ಯುದ್ಧದ ತೀವ್ರತೆ ಹೆಚ್ಚುತ್ತಿರುವ ಬೆನ್ನಲ್ಲೇ ಇರಾನ್ (Iran) ಅತ್ಯಾಧುನಿಕ, ದೇಶೀಯ ನಿರ್ಮಿತ ‘ಡ್ಯಾನ್ಸಿಂಗ್ ಮಿಸೈಲ್ (Dancing Missile)’ ಸೆಜ್ಜಿಲ್ (Sejjil) ಮೂಲಕ ಇಸ್ರೇಲ್ ವಿರುದ್ಧ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದರೊಂದಿಗೆ, ಇರಾನ್ ಮೊತ್ತಮೊದಲ ಬಾರಿಗೆ ಇಸ್ರೇಲ್ ವಿರುದ್ಧ ಡ್ಯಾನ್ಸಿಂಗ್ ಮಿಸೈಲ್ ಪ್ರಯೋಗ ಮಾಡಿದಂತಾಗಿದೆ. ಇಸ್ರೇಲ್‌ನ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್, ಸೆಜ್ಜಿಲ್ ಮೂಲಕ ದಾಳಿ ನಡೆಸಿದೆ. ಸದ್ಯ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಜಗತ್ತಿನ ಗಮನ ಸೆಳೆದಿದೆ. ‘ಡ್ಯಾನ್ಸಿಂಗ್ ಮಿಸೈಲ್’ ಎಂದರೇನು? ಡ್ಯಾನ್ಸಿಂಗ್ ಮಿಸೈಲ್ ಸೆಜ್ಜಿಲ್ ಇದರ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ.
ಸೆಜ್ಜಿಲ್ ಕ್ಷಿಪಣಿ ಎಂದರೇನು?
ಸೆಜ್ಜಿಲ್-2 ಇರಾನ್ನಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎರಡು ಹಂತಗಳ ಘನ ಇಂಧನ (Solid Fuel) ಬಳಸುವ ಮಧ್ಯಮ ದೂರದ ಬಾಲಿಸ್ಟಿಕ್ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯ ಅಂದಾಜು ವ್ಯಾಪ್ತಿ ಸುಮಾರು 2,000 ಕಿಲೋಮೀಟರ್ ಆಗಿದ್ದು, ಸುಮಾರು 700 ಕಿಲೋಗ್ರಾಂ ತೂಕದ ಪೇಲೋಡ್ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.