ಬಲ್ಕ್ ಡೀಸೆಲ್ ಬೆಲೆ 22 ರೂಪಾಯಿ ಏರಿಕೆ, KSRTC, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಸಾಧ್ಯತೆ
ಬಲ್ಕ್ ಡೀಸೆಲ್ ಬೆಲೆ 22 ರೂಪಾಯಿ ಏರಿಕೆ, KSRTC, ಬಿಎಂಟಿಸಿ ಟಿಕೆಟ್ ದರ ಏರಿಕೆ ಸಾಧ್ಯತೆ, ಮಧ್ಯಪ್ರಾಚ್ಯ ಯುದ್ಧದಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ ಗೋಚರಿಸುತ್ತಿದೆ. ಜನಸಾಮಾನ್ಯರಿಗೆ ಇರಾನ್ ಹಾಗೂ ಇಸ್ರೇಲ್ ಯುದ್ದದ ಬಿಸಿ ತೀವ್ರವಾಗಿ ತಟ್ಟುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ, ಹೊಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ವ್ಯತ್ಯಯಗಳ ಬೆನ್ನಲ್ಲೇ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಜನಸಾಮಾನ್ಯರಿಗೆ ಪ್ರಯಾಣ ದರ ದುಬಾರಿ ಯಾಗುವ ಸಾಧ್ಯತೆ ಗೋಚರಿಸಿದೆ.
ಬಲ್ಕ್ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 22 ರೂಪಾಯಿ ಏರಿಕೆಯಾಗಿದೆ. ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್‌ಗೆ 22 ಏರಿಕೆಯಾಗಿದೆ. 87.67 ರೂಪಾಯಿ ಇದ್ದ ಬಲ್ಕ್ ಡಿಸೇಲ್ ದರ 109.59 ರೂಪಾಯಿಗೆ ಏರಿಕೆಯಾಗಿದೆ. ಸಾರಿಗೆ ನಿಗಮಗಳಿಂದಲೂ ಬಲ್ಕ್ ನಲ್ಲೇ ಡೀಸೆಲ್ ಖರೀದಿ ಮಾಡಲಾಗುತ್ತದೆ. ಇದರಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಸಾರಿಗೆ ಸಂಸ್ಥೆಗಳು ಪ್ರತಿ ದಿನ ಲಕ್ಷಾಂತರ ಲೀಟರ್ ಡೀಸೆಲ್ ಖರೀದಿ ಮಾಡುತ್ತದೆ. ಇಂದಿನಿಂದ ಬಲ್ಕ್ ಡಿಸೇಲ್ ದರ ಲೀ.ಗೆ 22 ರೂಪಾಯಿ ಏರಿಕೆಯಾಗಿರುವ ಹಿನ್ನಲೆಯಲ್ಲಿ ಟಿಕೆಟ್ ದರದಲ್ಲೂ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸಾರಿಗೆ ನಿಮಗಳಿಗೆ ದರದಲ್ಲಿ ವಿನಾಯಿತಿ ನೀಡಿದರೆ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ.