‘ಬ್ರೋಕನ್’ ಪಾಕಿಸ್ತಾನವನ್ನು ‘ಬ್ರೋಕರ್’ ಆಗಿ ಪರಿವರ್ತಿಸಿದ ಮೋದಿ: ಕಾಂಗ್ರೆಸ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ವೈಫಲ್ಯಗಳಿಂದಾಗಿ ಅಸ್ಥಿರ ದೇಶವೊಂದು ಈಗ ಮಧ್ಯವರ್ತಿ ದೇಶವಾಗಲು ಸಜ್ಜಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟೀಕಿಸಿದ್ದಾರೆ. ‘ಪಾಕಿಸ್ತಾನದಂತೆ ನಮ್ಮದು ದಲ್ಲಾಳಿ ದೇಶವಲ್ಲ’ ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನವು ಸಂಧಾನಕಾರನಾಗಿ ಹೊರಹೊಮ್ಮಿರುವುದು ಭಾರತದ ಪ್ರಾದೇಶಿಕ ರಾಜತಾಂತ್ರಿಕತೆಗೆ ಹಿನ್ನಡೆಯಾಗಿದೆ. ಜೈಶಂಕರ್ ಅವರು ಭಾರತಕ್ಕೆ ಉಂಟಾಗಿರುವ ಈ ತೀವ್ರ ಮುಜುಗರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯು ಕೇವಲ ಆಡಂಬರದಿಂದ ಕೂಡಿದ್ದು, ವಾಸ್ತವದಲ್ಲಿ ಹೇಡಿತನದಿಂದ ಕೂಡಿದೆ ಎಂಬುದಕ್ಕೆ ಪಾಕಿಸ್ತಾನವು ಮಧ್ಯವರ್ತಿ ಪಾತ್ರವನ್ನು ಪಡೆಯುತ್ತಿರುವುದೇ ಸಾಕ್ಷಿ’ ಎಂದು ಹೇಳಿದ್ದಾರೆ.
‘ಏನೇ ಇರಲಿ, ನಮ್ಮ ರಾಜತಾಂತ್ರಿಕತೆ ವೈಫಲ್ಯಗಳು ಅಸ್ಥಿರವಾಗಿದ್ದ ದೇಶವನ್ನು ಮಧ್ಯವರ್ತಿ ದೇಶವನ್ನಾಗಿ ಮಾಡಿದೆ ಎಂಬುದು ವಾಸ್ತವ. ಇದು ಸ್ವಯಂ ಘೋಷಿತ ವಿಶ್ವಗುರುಗಳ ವಿಶಿಷ್ಟ ಕೊಡುಗೆಯಾಗಿದೆ. ವಿದೇಶಾಂಗ ಸಚಿವರ ಯಾವುದೇ ಪಟಾಕಿ ಮಾತುಗಳು ಇದನ್ನು ಅಳಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.