ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಎರಡನೇ ಪೂರಕ ಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಎರಡನೇ ಪೂರಕ ಪಟ್ಟಿಯನ್ನು ಚುನಾವಣಾ ಆಯೋಗವು ಶುಕ್ರವಾರ ತಡರಾತ್ರಿ ಪ್ರಕಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಚುನಾವಣಾ ಆಯೋಗವು ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲಿ ಒಟ್ಟು ಹೆಸರುಗಳನ್ನು ತೆಗೆದುಹಾಕುವುದು ಅಥವಾ ಸೇರಿಸಿದವರ ವಿವರಗಳನ್ನು ಒದಗಿಸಿಲ್ಲ.
‘ಎರಡನೇ ಪೂರಕ ಪಟ್ಟಿಯನ್ನು ಪ್ರಕಟಿಸಲಾಗಿದೆ. ನಾವು ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಮಾರ್ಚ್ 27ರಂದು ರಾತ್ರಿ 11.30ಕ್ಕೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಬೂತ್‌ವಾರು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ.
ಆದರೆ, ಕೆಲವು ತಾಂತ್ರಿಕ ದೋಷಗಳಿಂದಾಗಿ ಹೆಸರುಗಳ ಅಳಿಸುವಿಕೆ ಅಥವಾ ಸೇರ್ಪಡೆ ಕುರಿತಾದ ಡೇಟಾವನ್ನು ಹೊಂದಿರುವ ವೆಬ್‌ಸೈಟ್‌ನ ಪುಟಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗವು ಸೋಮವಾರ ಮತದಾರರ ಮೊದಲ ಪೂರಕ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ವಿವಿಧ ಭಾಗಗಳಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಅಥವಾ ಆ ಪಟ್ಟಿಯಲ್ಲಿ ವಿಲೇವಾರಿ ಮಾಡಲಾದ ಪ್ರಕರಣಗಳ ನಿಖರವಾದ ಸಂಖ್ಯೆಯ ಬಗ್ಗೆ ಟೀಕೆಗಳು ವ್ಯಾಕ್ತವಾಗಿದ್ದವು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ 58 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದ್ದು, ರಾಜ್ಯದ ಒಟ್ಟು ಮತದಾರರ ಸಂಖ್ಯೆ 7.08 ಕೋಟಿಗೆ ಇಳಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.