ಗೃಹಿಣಿಯರಿಗೆ ₹8 ಸಾವಿರ ಕೂಪನ್, ಮಾಸಿಕ ಸಹಾಯಧನ ಹೆಚ್ಚಳ: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 23ಕ್ಕೆ ನಿಗದಿಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಡುವೆ ಅಧಿಕಾರಕ್ಕೆ ಏರುವ ಪೈಪೋಟಿ ತೀವ್ರಗೊಂಡಿದ್ದು, ಭಾನುವಾರ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಪಕ್ಷದ (ಡಿಎಂಕೆ) ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಸೆಳೆಯುವುದಕ್ಕಾಗಿ ಆಡಳಿತಾರೂಢ ಡಿಎಂಕೆ ‘ಇಲ್ಲತ್ತರಸಿ’(ಗೃಹಿಣಿ) ಕೂಪನ್ ಯೋಜನೆಯನ್ನು ಭಾನುವಾರ ಘೋಷಿಸಿದೆ. ವಿವಿಧ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಅಥವಾ ಬದಲಾಯಿಸಲು ಗೃಹಿಣಿಯರಿಗೆ ಈ ಯೋಜನೆಯಡಿ ₹8 ಸಾವಿರ ಮೌಲ್ಯದ ಕೂಪನ್ ನೀಡುವ ಭರವಸೆ ನೀಡಲಾಗಿದೆ.
ಈ ಕೂಪನ್ ಬಳಸಿಕೊಂಡು ಮಹಿಳೆಯರು ಟಿ.ವಿ, ರೆಫ್ರಿಜರೇಟರ್, ಮಿಕ್ಸಿ, ಮೈಕ್ರೊವೇವ್ ಓವನ್, ಇಂಡಕ್ಷನ್ ಸ್ಟೌ ಸೇರಿ ವಿವಿಧ ಗೃಹೋಪಯೋಗಿ ವಸ್ತುಗಳ ಖರೀದಿಸಬಹುದು.
ಇಲ್ಲವೇ, ಈಗಾಗಲೇ ಇರುವ ಇಂತಹ ವಸ್ತುಗಳನ್ನು ವಿನಿಮಯ ಮಾಡಿ, ಬೇರೆ ವಸ್ತುಗಳ ಖರೀದಿಸಬಹುದು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಮಹಿಳೆಯರಿಗೆ ಈ ಹೊಸ ಯೋಜನೆಯಡಿ ಒಂದು ಬಾರಿ ಈ ಕೂಪನ್ ಕೊಡಲಾಗುವುದು ಎಂದು ಸ್ಟಾಲಿನ್ ಹೇಳಿದರು.
ಮಹಿಳೆಯರಿಗೆ ಮಾಸಿಕ ಸಹಾಯಧನವನ್ನು ಈಗಿರುವ 1,000 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸುವುದು. ಉಚಿತ ವಿದ್ಯುತ್ ಯೋಜನೆ ವಿಸ್ತರಣೆ, ಉಪಾಹಾರ ಯೋಜನೆಯನ್ನು 8ನೇ ತರಗತಿವರೆಗೆ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ಘೋಷಣೆಗಳ ಮಾಡಿದ್ದಾರೆ.
ಸಿ.ಎಂ ಆರೋಗ್ಯ ವಿಮಾ ಯೋಜನೆಯಡಿ ವಿಮಾ ಮೊತ್ತ ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಳ, 50 ವರ್ಷ ಮೇಲ್ಪಟ್ಟ ವೃದ್ಧರು, ವಿಧವೆಯರು ಹಾಗೂ ಅವಿವಾಹಿತೆಯರಿಗೆ ನೀಡುವ ಪಿಂಚಣಿ ₹2 ಸಾವಿರಕ್ಕೆ ಹೆಚ್ಚಳ ಸೇರಿ ಹಲವು ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.