ಚಂದಿರನತ್ತ ಮತ್ತೆ ಮಾನವ: ಆರ್ಟೆಮಿಸ್-2 ಐತಿಹಾಸಿಕ ಪಯಣಕ್ಕೆ ಗಗನಯಾನಿಗಳು ಸಜ್ಜು
ಬರೋಬ್ಬರಿ 50 ವರ್ಷಗಳ ನಂತರ ಮಾನವ ಮತ್ತೆ ಚಂದ್ರನ ಹತ್ತಿರಕ್ಕೆ ಪ್ರಯಾಣ ಬೆಳೆಸುತ್ತಿರುವ ಐತಿಹಾಸಿಕ ಆರ್ಟೆಮಿಸ್-II (Artemis II) ಮಿಷನ್‌ನ ಉಡಾವಣೆಗೆ ನಾಸಾ ಸಜ್ಜಾಗಿದೆ. ಇಂದು (ಏಪ್ರಿಲ್ 1) ಸಂಜೆ 6.24ಕ್ಕೆ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ನಾಸಾದ ಅತ್ಯಂತ ಶಕ್ತಿಶಾಲಿ SLS ರಾಕೆಟ್, ಓರಾಯನ್ ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.
ಈ ಮಿಷನ್‌ನಲ್ಲಿ ನಾಲ್ವರು ಗಗನಯಾತ್ರಿಗಳು ಪಾಲ್ಗೊಳ್ಳುತ್ತಿದ್ದು, ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಈ ಪ್ರಯಾಣವು 10 ದಿನಗಳ ಕಾಲ ನಡೆಯಲಿದೆ. ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಿಗೆ ಚಂದ್ರನ ಸುತ್ತ ಸುತ್ತಿ ಭೂಮಿಗೆ ಹಿಂತಿರುಗಲಿದ್ದಾರೆ. ಈ ಪ್ರಯಾಣದಲ್ಲಿ ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಒಂದು ಪಥದಲ್ಲಿ 6,85,000 ಮೈಲುಗಳಷ್ಟು ಪ್ರಯಾಣಿಸಿ ಭೂಮಿಗೆ ಹಿಂತಿರುಗಲಿದ್ದಾರೆ.
ಭವಿಷ್ಯದಲ್ಲಿ ಮಾನವನನ್ನು ಚಂದ್ರನ ಮೇಲೆ ಇಳಿಸುವ (Artemis III) ಮಿಷನ್‌ಗೆ ಮುನ್ನ, ಓರಾಯನ್ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಪರೀಕ್ಷಿಸುವುದು ಇದರ ಮುಖ್ಯ ಗುರಿಯಾಗಿದೆ. ಈ ಐತಿಹಾಸಿಕ ಗಗನಯಾನದಲ್ಲಿ ರೀಡ್ ವೈಸ್‌ಮನ್ ಕಮಾಂಡರ್ ಆಗಿರಲಿದ್ದಾರೆ. ಪೈಲಟ್ ಆಗಿ ವಿಕ್ಟರ್ ಗ್ಲೋವರ್ ಮತ್ತು ಮಿಷನ್ ತಜ್ಞರಾಗಿ ಕ್ರಿಸ್ಟಿನಾ ಕೋಚ್, ಕೆನಡಾ ಬಾಹ್ಯಾಕಾಶ ಸಂಸ್ಥೆಯ ಗಗನಯಾನಿ ಜೆರೆಮಿ ಹ್ಯಾನ್ಸೆನ್ ಅವರು ನಿಯೋಜನೆಗೊಂಡಿದ್ದಾರೆ.
ಇವರ ವಿಶೇಷತೆ ಎಂದರೆ, ವಿಕ್ಟರ್ ಗ್ಲೋವರ್ ಇದೇ ಮೊದಲ ಬಾರಿಗೆ ಚಂದ್ರನತ್ತ ಪ್ರಯಾಣ ಬೆಳೆಸುತ್ತಿರುವ ಕಪ್ಪುವರ್ಣೀಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರಲ್ಲದೆ ಅತ್ಯಂತ ಸುದೀರ್ಘ ಕಾಲ ಬಾಹ್ಯಾಕಾಶ ಯಾತ್ರೆ ನಡೆಸಿರುವ ಮಹಿಳೆ ಎಂಬ ದಾಖಲೆ ನಿರ್ಮಿಸಿರುವ ಕ್ರಿಸ್ಟಿನಾ ಕೋಚ್, ಚಂದ್ರನ ಪರಿಭ್ರಮಣೆ ನಡೆಸುವ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ. ಜೆರೆಮಿ ಹ್ಯಾನ್ಸೆನ್ ಕೆನಡಾದ ಮೊದಲ ಗಗನಯಾತ್ರಿ ಎನಿಸಿಕೊಳ್ಳಲಿದ್ದಾರೆ.