Karnataka 2nd PUC Result 2026 Date: ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ, ಆನ್ಲೈನಲ್ಲಿ ನೋಡೋದು ಹೇಗೆಂಬ ಮಾಹಿತಿ ಇಲ್ಲಿದೆ
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ: 2026ರ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ ಎರಡನೇ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ ನಂಬರ್ ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಫಲಿತಾಂಶ ಯಾವಾಗ ಪ್ರಕಟ ಆಗಬಹುದು? ರಿಸಲ್ಟ್ ಅನ್ನು ಆನ್ಲೈನ್ನಲ್ಲಿ ನೋಡುವುದು ಹೇಗೆಂಬ ಮಾಹಿತಿ ಇಲ್ಲಿದೆ. ಬೆಂಗಳೂರು, ಏಪ್ರಿಲ್ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಮಾರ್ಚ್ 31ರಂದು ಪ್ರಥಮ ಪಿಯುಸಿ ಫಲಿತಾಂಶ ಯಶಸ್ವಿಯಾಗಿ ಪ್ರಕಟಗೊಂಡ ಬೆನ್ನಲ್ಲೇ, ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕೌತುಕ ಹೆಚ್ಚಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ ಎರಡನೇ ವಾರದಲ್ಲಿ (ಏಪ್ರಿಲ್ 7 ಅಥವಾ 8) ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.
ಮಂಡಳಿಯು ಮೊದಲು ಸುದ್ದಿಗೋಷ್ಠಿಯ ಮೂಲಕ ಫಲಿತಾಂಶದ ವಿವರಗಳನ್ನು ಹಂಚಿಕೊಂಡು, ನಂತರ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಅಥವಾ karresults.nic.in ನಲ್ಲಿ ಫಲಿತಾಂಶ ಪ್ರಕಟಿಸಲಿದೆ. ಆನ್ಲೈನ್ನಲ್ಲಿ ಸೆಕೆಂಡ್ ಪಿಯುಸಿ ಫಲಿತಾಂಶ ನೋಡುವುದು ಹೇಗೆ?
ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.
ಭವಿಷ್ಯದ ಉಲ್ಲೇಖಕ್ಕಾಗಿ ಇದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಫಲಿತಾಂಶದ ನಂತರ ಅಂಕಗಳ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ (Re-evaluation) ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಏಪ್ರಿಲ್ 25 ರಿಂದ ಮೇ ಮೊದಲ ವಾರದವರೆಗೆ ಪೂರಕ ಪರೀಕ್ಷೆಗಳನ್ನು ನಡೆಸಲು ಮಂಡಳಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.