ಬಿಜೆಪಿ ವಿರುದ್ಧ ಮಾತನಾಡಲು ರಾಘವ್ ಛಡ್ಡಾಗೆ ಭಯವೇಕೆ?: ಮಾಜಿ ಮುಖ್ಯಮಂತ್ರಿ ಅತಿಶಿ
ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಕೆಟ್ಟ ನಿರ್ಧಾರಗಳನ್ನು ಪ್ರಶ್ನಿಸಲು ರಾಘವ್ ಛಡ್ಡಾ ಅವರು ಏಕೆ ಭಯ ಪಡುತ್ತಿದ್ದಾರೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅತಿಶಿ ಪ್ರಶ್ನಿಸಿದ್ದಾರೆ. ರಾಜ್ಯಸಭೆ ಉಪನಾಯಕನ ಸ್ಥಾನ ಬದಲಾವಣೆ ಬೆನ್ನಲ್ಲೇ ಎಎಪಿ ಮತ್ತು ಸಂಸದ ರಾಘವ್ ಛಡ್ಡಾ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಎಎಪಿ ವಿರುದ್ಧ ಛಡ್ಡಾ ಆರೋಪ ಮಾಡಿದ ಬೆನ್ನಲ್ಲೇ ಅತಿಶಿ ಕೂಡ ಮಾತನಾಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ದೇಶದೊಳಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ದೇಶದಲ್ಲಿನ ಪ್ರಜಾಪ್ರಭುತ್ವ ಮತ್ತು ಸಂವಿಧಾನವು ಅಪಾಯದಲ್ಲಿದೆ.
ಆದರೆ, ಅದನ್ನು ಪ್ರಶ್ನಿಸಲು ಛಡ್ಡಾಗೆ ಭಯವೇಕೆ ಎಂದು ಎಎಪಿ ಹಿರಿಯ ನಾಯಕಿಯಾಗಿರುವ ಅತಿಶಿ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಅದು ಜನಸಾಮನ್ಯರಿಗೆ ಹೊರೆಯಾಗಿದೆ. ಆದರೆ, ಅದರ ಕುರಿತು ಛಡ್ಡಾ ಮಾತನಾಡುವುದಿಲ್ಲ. 2024ರ ಮಾರ್ಚ್‌ನಲ್ಲಿ ಅರವಿಂದ್ ಕ್ರೇಜಿವಾಲ್ ಅವರ ಬಂಧನವಾದಾಗ, ಎಲ್ಲಾ ಎಎಪಿ ನಾಯಕರು ಬೀದಿಗಿಳಿದು ಪ್ರತಿಭಟಿಸಿದ್ದೆವು. ಆದರೆ, ಅವರು ಮಾತ್ರ ಅದಕ್ಕೂ ಗೈರಾಗಿದ್ದರು ಎಂದಿದ್ದಾರೆ. ಅಬಕಾರಿ ಹಗರಣದಲ್ಲಿ ಅರವಿಂದ್ ಕ್ರೇಜಿವಾಲ್ ಅವರು ಜೈಲುಪಾಲಾಗಿದ್ದಾಗ, ರಾಘವ್ ಛಡ್ಡಾ ಅವರು ಅಂತರ ಕಾಯ್ದುಕೊಂಡಿದ್ದರು.
ರಾಜ್ಯಸಭೆಯಲ್ಲಿ ಎಎಪಿಯ 10 ಜನ ಸಂಸದರಿದ್ದಾರೆ. ಅದರಲ್ಲಿ 7 ಜನ ಪಂಜಾಬ್ ಮೂಲದವರಾಗಿದ್ದರೆ, ಮೂವರು ದೆಹಲಿಯವರಾಗಿದ್ದಾರೆ.