ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧಿಸದೆ ಇರಲು ಕಾರಣವೇನು?
ಚನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಈಗಾಗಲೇ ಬಿಜೆಪಿ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದ ಅಂತಿಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ. ಅಣ್ಣಾಮಲೈ ಅವರ ಹೆಸರು ಇರಲಿಲ್ಲ. ಐಪಿಎಸ್ ಹುದ್ದೆಯನ್ನೇ ತೊರೆದು ಬಿಜೆಪಿ ಪಕ್ಷಕ್ಕೆ ಬಂದಿದ್ದ ಅಣ್ಣಾಮಲೈ ಅವರ ಹೆಸರು ಅಭ್ಯರ್ಥಿಗಳು ಹೆಸರು ಇಲ್ಲದೆ ಇದ್ದದ್ದು ಅಚ್ಚರಿಗೆ ಕಾರಣವಾಗಿದೆ. ಪಟ್ಟಿ ಬಿಡುಗಡೆ ಬಳಿಕ ಮಾತನಾಡಿದ ಅವರು, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಅಣ್ಣಾಮಲೈ ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು.
ಆದರೆ ಪಕ್ಷದ ಮಾಹಿತಿ ಪ್ರಕಾರ, ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೆ ಸರಿದಿದ್ದಕ್ಕೆ ಪ್ರಮುಖ ಎರಡು ಕಾರಣಗಳಿವೆ. ಮೊದಲನೆಯದು, ಅವರ ತಂದೆ ಅನಾರೋಗ್ಯದಿಂದ ಒಳಲುತ್ತಿರುವುದರಿಂದ ಅವರನ್ನು ನೋಡಿಕೊಳ್ಳಲು ಅಣ್ಣಾಮಲೈ ನಿರ್ಧರಿಸಿದ್ದಾರೆ. ಮತ್ತೊಂದು ಕಾರಣ, ಕೊಯಮತ್ತೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಗೆಲ್ಲಬಹುದಾದ ಯಾವುದೇ ಸ್ಥಾನ ಬಿಜೆಪಿಗೆ ಹಂಚಿಕೆಯಾಗಿಲ್ಲ. ಈ ಎರಡು ಕಾರಣಗಳಿಂದ ಅಣ್ಣಾಮಲೈ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ತಂದೆಯ ಅನಾರೋಗ್ಯದ ಬಗ್ಗೆ ಈ ಹಿಂದೆ ಅಣ್ಣಾಮಲೈ ಅವರೇ ಸುದ್ದಿಗಾರರೊಂದಿಗೆ ಮಾತನಾಡಿದ್ದರು.
ಎನ್‌ಡಿಎ ಮೈತ್ರಿಕೂಟದಲ್ಲಿರುವ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ, ಬಿಜೆಪಿಗೆ 27 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಏಪ್ರಿಲ್ 23ರಂದು ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.