Assam: ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ಬಳಿಯಿದೆ 3 ದೇಶದ ಪಾಸ್‌ಪೋರ್ಟ್: ಕಾಂಗ್ರೆಸ್ ಆರೋಪ
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಶರ್ಮಾ ಅವರು ಮೂರು ದೇಶಗಳ ಪಾಸ್‌ಪೋರ್ಟ್ ಹೊಂದಿದ್ದಾರೆ ಮತ್ತು ವಿದೇಶಗಳಲ್ಲಿ ಅಪಾರ ಆಸ್ತಿಗಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪವನ್ನು ತಳ್ಳಿಹಾಕಿರುವ ಮುಖ್ಯಮಂತ್ರಿಗಳು, ಖೇರಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ್ದಾರೆ.
ಕಾಂಗ್ರೆಸ್ ಆರೋಪಗಳೇನು?:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಖೇರಾ, ರಿನಿಕಿ ಶರ್ಮಾ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಈಜಿಪ್ಟ್ ಹಾಗೂ ಆಂಟಿಗುವಾ ಮತ್ತು ಬಾರ್ಬುಡಾ ದೇಶಗಳ ಸಿಂಧು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ದುಬೈನಲ್ಲಿ ಆಸ್ತಿ ಮತ್ತು ಅಮೆರಿಕದ ವ್ಯೋಮಿಂಗ್‌ನಲ್ಲಿ 34.67 ಬಿಲಿಯನ್ ಡಾಲರ್ ಬಜೆಟ್‌ನ ಕಂಪನಿಯನ್ನು ಅವರು ಹೊಂದಿದ್ದಾರೆ.ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದಿರುವಾಗ, ಈ ಆಸ್ತಿ ವಿವರಗಳನ್ನು ಚುನಾವಣಾ ಅಫಿಡವಿಟ್‌ನಲ್ಲಿ ಏಕಕ್ಕೆ ಮುಚ್ಚಿಡಲಾಗಿದೆ? ಎಂದು ಪ್ರಶ್ನಿಸಿದರು. ಸಿಎಂ ತಿರುಗೇಟು
ಕಾಂಗ್ರೆಸ್ ಆರೋಪಗಳನ್ನು 'ನಿರಾಧಾರ ಮತ್ತು ರಾಜಕೀಯ ಪ್ರೇರಿತ' ಎಂದು ಕರೆದಿರುವ ಸಿಎಂ ಶರ್ಮಾ, "ಕಾಂಗ್ರೆಸ್ ಸೋಲಿನ ಭೀತಿಯಿಂದ ಇಂತಹ ಹತಾಶೆಯ ದಾಳಿ ನಡೆಸುತ್ತಿದೆ. ಪವನ್ ಖೇರಾ ಬಿಡುಗಡೆ ಮಾಡಿರುವ ದಾಖಲೆಗಳೆಲ್ಲವೂ ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ನಕಲಿ ದಾಖಲೆಗಳಾಗಿವೆ ಎಂದು ಕಿಡಿಕಾರಿದ್ದಾರೆ.
ದಾಖಲೆಗಳಲ್ಲಿನ ಲೋಪಗಳು
ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಶರ್ಮಾ, "ಪಾಸ್‌ಪೋರ್ಟ್‌ಗಳಲ್ಲಿನ ಸರ್‌ನೇಮ್‌ಗಳು ತಾಳೆಯಾಗುತ್ತಿಲ್ಲ, ಈಜಿಪ್ಟ್ ಪಾಸ್‌ಪೋರ್ಟ್‌ನಲ್ಲಿ ಕಾಗುಣಿತ ತಪ್ಪುಗಳಿವೆ ಮತ್ತು ಕ್ಯೂಆರ್ ಕೋಡ್‌ಗಳು ಕೆಲಸ ಮಾಡುತ್ತಿಲ್ಲ. ಇವು ಕೇವಲ ಸುಳ್ಳು ಸುದ್ದಿಗಳು," ಎಂದು ಸ್ಪಷ್ಟಪಡಿಸಿದರು. ಮುಂದಿನ 48 ಗಂಟೆಗಳ ಒಳಗೆ ಪವನ್ ಖೇರಾ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದ್ದಾರೆ.