ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನುಸುಳುಕೋರರ ಉಚ್ಚಾಟನೆ: ಅಮಿತ್ ಶಾ
ಪಥರ್‌ಕಾಂಡಿ (ಅಸ್ಸಾಂ): ಪಶ್ಚಿಮ ಬಂಗಾಳದಲ್ಲಿ 'ಪರಿವರ್ತನೆ' ಅನಿವಾರ್ಯವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ನುಸುಳುಕೋರರನ್ನು ಅವರ ದೇಶಗಳಿಗೆ ಮರಳಿ ಕಳುಹಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಘೋಷಿಸಿದ್ದಾರೆ.
ಅಸ್ಸಾಂನ ಪಥರ್‌ಕಾಂಡಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿರುವ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಹೊರಹಾಕಲಾಗುವುದು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ, ಏಕೆಂದರೆ ಈ ಕಾಯ್ದೆಯಿಂದ ನುಸುಳುಕೋರರಿಗೆ ಜಾಗವಿರುವುದಿಲ್ಲ ಎಂಬ ಭಯ ಅವರಿಗಿದೆ ಎಂದರು.
ಅಸ್ಸಾಂನ 'ಜಾತಿ, ಮಾತಿ ಮತ್ತು ಭೇಟಿ' (ಸಮುದಾಯ, ಭೂಮಿ ಮತ್ತು ಅಡಿಪಾಯ) ರಕ್ಷಣೆಗೆ ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.
ಅಸ್ಸಾಂನ ಬರಾಕ್ ಕಣಿವೆಯಲ್ಲಿ ಕಾಂಗ್ರೆಸ್ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದೆ. ಇದರಿಂದಾಗಿ ಶ್ರೀಭೂಮಿ, ಸಿಲ್ಚಾರ್ ಮತ್ತು ಕಚಾರ್ ಜಿಲ್ಲೆಗಳಲ್ಲಿ ಸ್ಥಳೀಯರ ಬದಲಿಗೆ ನುಸುಳುಕೋರರೇ ಪ್ರಬಲರಾಗುತ್ತಿದ್ದಾರೆ ಎಂದು ಶಾ ಆರೋಪಿಸಿದರು. ಕರೀಮ್‌ಗಂಜ್ ಹೆಸರನ್ನು 'ಶ್ರೀಭೂಮಿ' ಎಂದು ಬಿಜೆಪಿ ಮರುನಾಮಕರಣ ಮಾಡಿದೆ. ಆದರೆ, "ಇಟಲಿಯಲ್ಲಿ ಬೇರುಗಳನ್ನು ಹೊಂದಿರುವವರಿಗೆ ಈ ಹೆಸರು ಬದಲಾವಣೆಯ ಮಹತ್ವ ಹೇಗೆ ತಾನೇ ತಿಳಿಯಲು ಸಾಧ್ಯ?" ಎಂದು ಸೋನಿಯಾ ಗಾಂಧಿ ಅವರ ಹೆಸರನ್ನು ಎತ್ತದೆ ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮಿ ಮತ್ತು ಬಂಗಾಳಿ ಎರಡೂ ಭಾಷೆಗಳನ್ನು 'ಶಾಸ್ತ್ರೀಯ ಭಾಷೆ'ಗಳೆಂದು ಘೋಷಿಸುವ ಮೂಲಕ ಆಯಾ ಭಾಗದ ಸಂಸ್ಕೃತಿಗೆ ಗೌರವ ನೀಡಿದ್ದಾರೆ ಎಂದು ಅಮಿತ್ ಶಾ ಈ ಸಂದರ್ಭದಲ್ಲಿ ಸ್ಮರಿಸಿದರು.
ಮುಂಬರುವ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.