ಕಾಂಗ್ರೆಸ್ಸಿಗೆ ಚುನಾವಣೆ ಖಚಿತ, ಸೋಲು ನಿಶ್ಚಿತ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ
ದಾವಣಗೆರೆ (ಏ.07): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಿದ್ದು, ತಾವೇ ಗೆಲ್ಲಲು ಉಚಿತ, ಖಚಿತ, ನಿಶ್ಚಿತ ಎನ್ನುತ್ತಿದ್ದವರಿಗೆ ಚುನಾವಣೆ ಹತ್ತಿರ ಬಂದಂತೆ ಚುನಾವಣೆ ಖಚಿತ, ಸೋಲು ನಿಶ್ಚಿತ ಎಂಬ ಅರಿವಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ. ಅಹಿಂದ ಜಪ ಮಾಡುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣದಲ್ಲಿ ಅಹಿಂದ ವರ್ಗದ ಅಭ್ಯರ್ಥಿಗೆ ಮತ ಹಾಕಬೇಡಿ, ಮುಸ್ಲಿಮರಿಗೆ ಮತ ಹಾಕಬೇಡಿ ಎನ್ನುತ್ತಾರೆ. ಬಾಗಲಕೋಟೆಯಲ್ಲಿ ಅಹಿಂದಗೆ ಮತ ಹಾಕಿ ಎನ್ನುತ್ತಾರೆ ಎಂದರು.
ಮುಸಲ್ಮಾನರಿಂದಲೇ ಸರ್ಕಾರ ಮಾಡಿದ್ದೇವೆನ್ನುವ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮುಸ್ಲಿಮರಿಗೆ ದೋಖಾ ಆಗಿದೆ. ಹಿಂದೂಗಳಿಗೆ ಓಟಿಗೆ ₹5ರಿಂದ ₹7 ಸಾವಿರ, ಮುಸ್ಲಿಮರಿಗೆ ಓಟಿಗೆ ₹10 ಸಾವಿರಗಳನ್ನು ಕಾಂಗ್ರೆಸ್ಸಿನವರು ನೀಡುತ್ತಿದ್ದಾರಂತೆ.
ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸಂಪತ್ತಿಗೆ ಸವಾಲು ಹಾಕಿದ್ದಾರೆ ಎಂದು ತಿಳಿಸಿದರು. ನಿಮ್ಮ ಸಂಪತ್ತು ದಕ್ಷಿಣ ಕ್ಷೇತ್ರದಲ್ಲಿ ಏನೂ ಕೆಲಸ ಮಾಡುವುದಿಲ್ಲ. ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪನೇ ಇಲ್ಲಿ ಗೆಲ್ಲುವುದು ನಿಶ್ಚಿತ. ದಲಿತರ ಓಟುಗಳಂತೂ ಕಾಂಗ್ರೆಸ್ಸಿಗೆ ಇಲ್ಲ. ಒಳಮೀಸಲಾತಿ ವಿಚಾರದಲ್ಲಿ ದಲಿತರಿಗೆ ಕಾಂಗ್ರೆಸ್ ಸರ್ಕಾರ ದೋಖಾ ಮಾಡಿದೆ. ನಾವು ಮುಸಲ್ಮಾನರ ವಿರೋಧಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು.