ವಿಟೊ ಅಧಿಕಾರ: ಹೊರ್ಮುಜ್ ತೆರೆಯುವ ವಿಶ್ವಸಂಸ್ಥೆ ನಿರ್ಣಯ ಸೋಲಿಸಿದ ರಷ್ಯಾ, ಚೀನಾ
ವಿಶ್ವಸಂಸ್ಥೆ: ಇರಾನ್ ದಿಗ್ಬಂಧನ ವಿಧಿಸಿರುವ ಹೊರ್ಮುಜ್ ಜಲಸಂಧಿಯನ್ನು ತೆರೆಯುವ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಮತ್ತು ಚೀನಾ ಮಂಗಳವಾರ ವಿಟೊ ಅಧಿಕಾರ ಬಳಸಿ ತೆರವು ಮಾಡಿವೆ. ಜಾಗತಿಕ ತೈಲ ಸರಬರಾಜಿನ ಐದನೇ ಒಂದು ಭಾಗದಷ್ಟು ಹಾದುಹೋಗುವ ಪ್ರಮುಖ ಜಲಮಾರ್ಗವಾದ ಹೊರ್ಮುಜ್ ಜಲಸಂಧಿ ತೆರೆಯುವ ಬಗ್ಗೆ ಬಹ್ರೇನ್ ಪ್ರಸ್ತಾಪಿಸಿದ ನಿರ್ಣಯದ ಮೇಲೆ 15 ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ ಚಲಾಯಿಸಿತ್ತು. 11 ಮತಗಳು ಪರವಾಗಿ ಬಿದ್ದರೆ, ಎರಡು ಮತ ವಿರುದ್ಧವಾಗಿ ಬಿದ್ದಿದ್ದವು. ಎರಡು ಮತಗಳು ಮತದಾನದಲ್ಲಿ ಗೈರಾಗಿದ್ದವು.
ಆದರೆ, ವಿಟೊ ಅಧಿಕಾರ ಹೊಂದಿರುವ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದರಿಂದ ನಿರ್ಣಯಕ್ಕೆ ಸೋಲಾಯಿತು.
‘ಕಚ್ಚಾ ವಸ್ತುಗಳು ಮತ್ತು ಅಗತ್ಯ ಸರಬರಾಜುಗಳ ನಿರ್ಬಂಧದಿಂದಾಗಿ ಆಹಾರ ಬೆಲೆಗಳು ಮತ್ತು ಇಂಧನ ವೆಚ್ಚಗಳು ಗಗನಕ್ಕೇರುತ್ತಿವೆ. ಇರಾನ್‌ನ ಕಾನೂನುಬಾಹಿರ ಕ್ರಮಗಳಿಂದಾಗಿ ಪ್ರಪಂಚದಾದ್ಯಂತ ಶತಕೋಟಿ ಜನರು ಮೂಲಭೂತ ಸರಕುಗಳಿಗೆ ಹೆಚ್ಚು ಹಣ ಪಾವತಿಸುತ್ತಿದ್ದಾರೆ. ಹೊರ್ಮುಜ್ ಜಲಸಂಧಿಯಲ್ಲಿ ಸಂಚರಣೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಸಮಯ ಈಗ ಬಂದಿದೆ’ಎಂದು ನಿರ್ಣಯಕ್ಕೂ ಮೊದಲು ವಿಶ್ವಸಂಸ್ಥೆ ಎಕ್ಸ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿತ್ತು.
ಜಲಸಂಧಿಯನ್ನು ತೆರೆಯಲು ನಿರ್ಣಯನ್ನು ಅಂಗೀಕರಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಇರಾನ್‌ನ ದಾಳಿಗಳು ಮತ್ತು ಬೆದರಿಕೆಗಳನ್ನು ಕೊನೆಗೊಳಿಸಲು ಯುಎಇ ಯುಎನ್‌ಎಸ್‌ಸಿಯನ್ನು ಒತ್ತಾಯಿಸಿದೆ ಎಂದು ಅದು ಹೇಳಿತ್ತು. ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ಮತ್ತು ಜೋರ್ಡಾನ್ ಬೆಂಬಲದೊಂದಿಗೆ ಬಹ್ರೇನ್, ಹೊರ್ಮುಜ್ ಜಲಸಂಧಿಯ ಕುರಿತು ಭದ್ರತಾ ಮಂಡಳಿಯ ನಿರ್ಣಯವನ್ನು ಪ್ರಸ್ತಾಪಿಸಿತ್ತು.
ಬಹ್ರೇನ್ ಪ್ರಸ್ತುತ ಏಪ್ರಿಲ್ ತಿಂಗಳಿಗೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ.
ಪ್ರಸ್ತಾಪಿತ ಕರಡು ನಿರ್ಣಯದ ಆರಂಭಿಕ ಆವೃತ್ತಿಯಲ್ಲಿ ಹೊರ್ಮುಜ್ ಜಲಸಂಧಿ ತೆರೆಯಲು ಅಗತ್ಯವಿರುವ ಎಲ್ಲ ವಿಧಾನಗಳನ್ನು ಬಳಸಲು ಈ ಪ್ರದೇಶದ ದೇಶಗಳಿಗೆ ಅವಕಾಶ ನೀಡುವ ಅಂಶಗಳು ಇದ್ದವುಎಂದು ತಿಳಿದುಬಂದಿದೆ.
ಕಳದ ಶುಕ್ರವಾರವೇ ಹೊರ್ಮುಜ್ ಜಲಸಂಧಿ ತೆರೆಯುವ ಬಗ್ಗೆ ಭದ್ರತಾ ಮಂಡಳಿಯಲ್ಲಿ ನಿರ್ಣಯದ ಮೇಲೆ ಮತದಾನ ಆಗಬೇಕಿತ್ತು. ಆದರೆ, ಅಂದು ಗುಡ್ ಫ್ರೈಡೇ ಇದ್ದುದರಿಂದ ರಜೆ ಹಿನ್ನೆಲೆ ಮುಂದೂಡಲಾಗಿತ್ತು.