ಪಶ್ಚಿಮ ಏಷ್ಯಾ ಸಂಘರ್ಷ: ವಿಮಾನ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ತೈಲ ಬಿಕ್ಕಟ್ಟು ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನ ಬೆಲೆ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳ ಟಿಕೆಟ್ ದರಗಳ ಮೇಲೆ ಇಂಧನದ ಹೆಚ್ಚುವರಿ ಶುಲ್ಕ (Fuel Surcharge) ವಿಧಿಸಿದೆ. ದೇಶೀಯ ವಿಮಾನ ಪ್ರಯಾಣ ದರವು ಅಂತರವನ್ನು ಆಧರಿಸಿ ₹299ರಿಂದ ₹899ವರೆಗೆ ಏರಿಕೆಯಾಗಲಿದೆ. ಪರಿಷ್ಕೃತ ವಿಮಾನ ಟಿಕೆಟ್‌ಗಳ ದರ ಇಂದಿನಿಂದ (ಬುಧವಾರ) ಜಾರಿಗೆ ಬರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ಈ ಹೊರೆ ಮತ್ತಷ್ಟು ಹೆಚ್ಚಿರಲಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ₹2,232ರಿಂದ ₹26,040ರವರೆಗೆ ಏರಿಕೆಯಾಗಲಿದೆ. ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರ್ಗಗಳ ಹೊಸ ದರಗಳು ಏಪ್ರಿಲ್ 10 ರಿಂದ ಜಾರಿಗೆ ಬರಲಿವೆ ಎಂದು ಸಂಸ್ಥೆ ತಿಳಿಸಿದೆ.