ಬೆಂಗಳೂರು STRR: ಕೇವಲ 54 ಮೀಟರ್ ರೈಲ್ವೆ ಗರ್ಡರ್ ವಿಳಂಬದಿಂದ ಎರಡು ವರ್ಷ 21 ಕಿ.ಮೀ ರಸ್ತೆ ಸಂಚಾರಕ್ಕೆ ಬ್ರೇಕ್!
ಬೆಂಗಳೂರು (ಏ.8): ಒಟ್ಟು 280.8 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (NH-948A) ಯೋಜನೆಯಡಿ ಹೊಸಕೋಟೆಯಿಂದ ತಮಿಳುನಾಡು ಗಡಿಯವರೆಗಿನ 20.9 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಉಳಿದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ನೈಋತ್ಯ ರೈಲ್ವೆ (SWR) ನಡುವಿನ ಅನುಮೋದನೆಗಳ ಜಟಾಪಟಿಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಮೇಲೆ ಅಳವಡಿಸಬೇಕಾದ 54 ಮೀಟರ್ ಉದ್ದದ 'ಬೌಸ್ಟ್ರಿಂಗ್ ಗರ್ಡರ್' (Bowstring Girder) ಕಾಮಗಾರಿ ವಿಳಂಬವೇ ಈ ಒಟ್ಟು 20.9 ಕಿ.ಮೀ ರಸ್ತೆ ಬಳಕೆಗೆ ಮುಕ್ತವಾಗದಿರಲು ಕಾರಣ. ಈ ಯೋಜನೆಯನ್ನು 2022ರಲ್ಲಿ ಎಸ್ ಅಂಡ್ ಪಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಮತ್ತು ಸ್ಕೈಲಾರ್ಕ್ ಇನ್ಫ್ರಾ ಇಂಜಿನಿಯರಿಂಗ್ ಜಂಟಿ ಸಂಸ್ಥೆಗೆ ನೀಡಲಾಗಿತ್ತು. ರಸ್ತೆಯ ಬಹುತೇಕ ಭಾಗ ಪೂರ್ಣಗೊಂಡಿದ್ದರೂ, ರೈಲ್ವೆ ಮೇಲ್ಸೇತುವೆಯ (ROB) ಒಂದು ಸಣ್ಣ ಭಾಗ ನಾಲ್ಕು ವರ್ಷಗಳಿಂದ ಅಪೂರ್ಣವಾಗಿದೆ.
ಟ್ರಾಫಿಕ್ ಸಮಸ್ಯೆ ಮುಂದುವರಿಕೆ
ಈ ರಸ್ತೆ ಪೂರ್ಣಗೊಳ್ಳದ ಕಾರಣ, ಬೆಂಗಳೂರಿನ ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಸಂಚರಿಸಬೇಕಾದ ಭಾರಿ ಟ್ರಕ್‌ಗಳು ಇಂದಿಗೂ ನಗರದ ಒಳಗಿನ ರಸ್ತೆಗಳ ಮೂಲಕವೇ ಹಾದುಹೋಗುತ್ತಿವೆ. ಇದರಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗುತ್ತಿಲ್ಲ. "ನಾವು ಈ ವಿಭಾಗದ 20.25 ಕಿ.ಮೀ ಕಾಮಗಾರಿ ಮುಗಿಸಿದ್ದೇವೆ, ಕೇವಲ ರೈಲ್ವೆ ಸ್ಪ್ಯಾನ್ ಕೆಲಸವಷ್ಟೇ ಬಾಕಿಯಿದೆ," ಎಂದು NHAI ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನುಮೋದನೆಗಳ ಜಟಾಪಟಿ
2024ರ ಏಪ್ರಿಲ್ 5ರಂದು ಸೇತುವೆಯ ವಿನ್ಯಾಸದ (GAD) ಪರಿಷ್ಕೃತ ನಕ್ಷೆಗೆ ಅನುಮೋದನೆ ಸಿಕ್ಕಿತ್ತು., ಏಪ್ರಿಲ್ 2ರಂದು ಗರ್ಡರ್ ಅಳವಡಿಕೆಯ ವಿಧಾನದ (TAD) ನಕ್ಷೆಯನ್ನು ಸಲ್ಲಿಕೆ ಮಾಡಲಾಗಿತ್ತು. 2026ರ ಜನವರಿ 29ರಂದು ನೈಋತ್ಯ ರೈಲ್ವೆಯಿಂದ ಇದಕ್ಕೆ ಕೇವಲ ತಾತ್ವಿಕ ಅನುಮೋದನೆ ಸಿಕ್ಕಿದೆ, ಆದರೆ ಅಂತಿಮ ಅನುಮೋದನೆ ಇನ್ನೂ ಬಾಕಿಯಿದೆ ಎಂದು NHAI ಅಧಿಕಾರಿಗಳು ಹೇಳಿದ್ದಾರೆ. ಅನುಮೋದನೆ ಸಿಕ್ಕರೂ ಸಹ, ರೈಲು ಸಂಚಾರವನ್ನು ನಿಲ್ಲಿಸಿ ಗರ್ಡರ್ ಅಳವಡಿಸಲು ಪ್ರತ್ಯೇಕ 'ಬ್ಲಾಕ್' ಸಮಯವನ್ನು ರೈಲ್ವೆಯಿಂದ ಪಡೆಯಬೇಕಾಗುತ್ತದೆ. ಇದು ಕಾಮಗಾರಿಯನ್ನು ಮತ್ತಷ್ಟು ವಿಳಂಬಗೊಳಿಸುವ ಸಾಧ್ಯತೆಯಿದೆ.