ಟ್ರಂಪ್ ಸೂಚನೆಯಂತೆ ಪಾಕ್ ಪ್ರಧಾನಿಯಿಂದ ಮೆಸೇಜ್ ಕಾಪಿ-ಪೇಸ್ಟ್? ಟ್ರೋಲ್‌ಗೆ ಗುರಿ
ಇಸ್ಲಾಮಾಬಾದ್: ಪಾಕಿಸ್ತಾನದ ಮದ್ಯಸ್ಥಿಕೆಯಲ್ಲಿ ಅಮೆರಿಕ ಹಾಗೂ ಇರಾನ್ ನಡುವಣ ಯುದ್ಧದಲ್ಲಿ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದೆ. ಆದರೆ ಕದನ ವಿರಾಮ ಕುರಿತಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿರುವ ಟ್ವೀಟ್ ಹಲವಾರು ಗೊಂದಲಗಳಿಗೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ಪಾಕ್ ಪ್ರಧಾನಿ ಕದನ ವಿರಾಮದ ಮೆಸೇಜ್ ಅನ್ನು ಟ್ವೀಟ್ ಮಾಡಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣವಾಗಿರುವುದು ಶೆಹಬಾಜ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್.
ಆ ಪೋಸ್ಟ್‌ನ ಆರಂಭದಲ್ಲಿ 'ಡ್ರಾಫ್ಟ್ - ಪಾಕಿಸ್ತಾನ್ ಪಿಎಂ ಮೆಸೇಜ್ ಆನ್ ಎಕ್ಸ್' ಎಂಬ ಸಾಲು ಹಾಗೆಯೇ ಉಳಿದುಕೊಂಡಿದೆ. ಯಾರೋ ಅಧಿಕಾರಿಗಳು ಸಿದ್ಧಪಡಿಸಿದ ಕರಡು ಪ್ರತಿಯನ್ನು ಪಾಕಿಸ್ತಾನದ ಪ್ರಧಾನಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಎಚ್ಚೆತ್ತುಕೊಂಡ ಪಾಕ್ ಪ್ರಧಾನಿ ಟ್ವೀಟ್ ಸರಿಪಡಿಸಿ ಮತ್ತೆ ಪೋಸ್ಟ್ ಮಾಡಿದ್ದಾರೆ. ಆದರೆ ಎಡಿಟ್ ಹಿಸ್ಟರಿಯಲ್ಲಿ ಮೂಲ ರೂಪ ಹಾಗೆಯೇ ಉಳಿದಿದೆ. ಇದನ್ನು ಉಲ್ಲೇಖಿಸಿ ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.