ಕದನ ವಿರಾಮದಿಂದ ಅಮೆರಿಕ ಸಾಧಿಸಿದ್ದೇನು? ಒಮರ್ ಅಬ್ದುಲ್ಲಾ ಪ್ರಶ್ನೆ
ಜಮ್ಮು: ಅಮೆರಿಕ–ಇರಾನ್ ನಡುವಿನ ಇತ್ತೀಚಿನ ಕದನ ವಿರಾಮದ ಫಲಿತಾಂಶದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನೆ ಎತ್ತಿದ್ದಾರೆ. ಸುಮಾರು 40 ದಿನಗಳ ಕಾಲ ನಡೆದ ಸಂಘರ್ಷದ ಬಳಿಕ ಅಮೆರಿಕ ಏನನ್ನು ಸಾಧಿಸಿತು ಎಂದು ಅವರು ಕೇಳಿದ್ದಾರೆ. ಯುದ್ಧವಿರಾಮ, ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ಯುದ್ಧ ಶುರುವಾಗುವ ಮುನ್ನವೇ ಆ ಮಾರ್ಗವು ಎಲ್ಲರಿಗೂ ಮುಕ್ತವಾಗಿಯೇ ಲಭ್ಯವಿತ್ತು. ಹೀಗಾಗಿ, ಈ 39 ದಿನಗಳ ಯುದ್ಧದಿಂದ ಅಮೆರಿಕ ಏನು ಸಾಧಿಸಿತು? ಎಂದು ಎಕ್ಸ್ ಖಾತೆಯಲ್ಲಿ #UnjustWar ಹ್ಯಾಶ್‌ಟ್ಯಾಗ್ ಜೊತೆಗೆ ಪ್ರಶ್ನಿಸಿದ್ದಾರೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಪಶ್ಚಿಮ ಏಷ್ಯಾದಲ್ಲಿ ನಡೆದ ಈ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆಗೆ ಅಡ್ಡಿಪಡಿಸಿತ್ತು. ಮಂಗಳವಾರ, ಎರಡು ವಾರಗಳ ಯುದ್ಧ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿದ್ದು, ಹೊರ್ಮುಜ್ ಜಲಸಂಧಿ ತೆರೆಯಲು ನಿರ್ಧರಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನನ್ನು ನಾಶಮಾಡುವ ನಿರ್ಧಾರದಿಂದ ಹಿಂದೆ ಸರಿದುದ್ದು, ಇರಾನ್ ಸಹ ದಾಳಿ ನಿಲ್ಲಿಸಿದೆ.