ಬಿಹಾರ; ನಿತೀಶ್ ಕುಮಾರ್ ಜಾಗಕ್ಕೆ ಸಾಮ್ರಾಟ್ ಚೌಧರಿ?
ಪಾಟ್ನಾ: ಬಿಹಾರ ರಾಜಕೀಯದಲ್ಲಿ ದಶಕಗಳ ಕಾಲ ಪಾರುಪತ್ಯ ನಡೆಸಿದ್ದ ಜೆಡಿಯು ಸುಪ್ರೀಂ ನಿತೀಶ್ ಕುಮಾರ್ ಅವರ ಮುಖ್ಯಮಂತ್ರಿ ಪರ್ವ ಅಂತ್ಯಗೊಳ್ಳುವ ಕಾಲ ಹತ್ತಿರ ಬಂದಿದೆ.
ಎರಡು ದಶಕಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಿತೀಶ್ ಕುಮಾರ್ ಅವರು ಮುಂದಿನ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯತ್ತ ನಿತೀಶ್ ಪಯಣ
ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೆಜ್ಜೆ ಇಡುತ್ತಿರುವ ನಿತೀಶ್ ಕುಮಾರ್, ಗುರುವಾರ ದೆಹಲಿಗೆ ತೆರಳಲಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಅವರು, ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವರು ಬಿಹಾರ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಏ. 14ಕ್ಕೆ ಮಹತ್ವದ ಸಭೆ
ಮೂಲಗಳ ಪ್ರಕಾರ, ಏ. 14 ರಂದು ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅದೇ ದಿನ ನಿತೀಶ್ ಕುಮಾರ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆಯಿದೆ. ಈ ಸಭೆಯಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸಾಮ್ರಾಟ್ ಚೌಧರಿ ಮುಂದಿನ ಸಿಎಂ?
ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ಬಿಹಾರದ ಮುಂದಿನ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಬಿಹಾರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತರಲು ಕೇಸರಿ ಪಡೆ ಸಜ್ಜಾಗಿದೆ.
ನಿತೀಶ್ ಕುಮಾರ್ ಅವರ ಈ ನಿರ್ಧಾರವನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ. "ಬಿಜೆಪಿಯು ಜೆಡಿಯು ಪಕ್ಷವನ್ನು ಮುಗಿಸಲು ಸಂಚು ರೂಪಿಸಿದೆ. ನಿತೀಶ್ ಕುಮಾರ್ ಅವರನ್ನು ಒತ್ತಾಯಪೂರ್ವಕವಾಗಿ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.